ಬಳ್ಳಾರಿ: ಭೂದಾಖಲೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಬಳ್ಳಾರಿ ಜಿಲ್ಲೆಯ ಕೃಷ್ಣಾನಗರ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಸರ್ಕಾರವು ಕೃಷ್ಣನಗರವನ್ನು ಕಂದಾಯ ಗ್ರಾಮ ಎಂದು ಘೋಷಿಸಿದ ನಂತರ, ಕೃಷಿ ಭೂಮಿಯ ಹಕ್ಕುಗಳು, ಹಿಡುವಳಿ ಮತ್ತು ಬೆಳೆಗಳ ದಾಖಲೆಗಳು (ಆರ್ಟಿಸಿ) ಸೇರಿದಂತೆ ಎಲ್ಲಾ ಭೂ ದಾಖಲೆಗಳನ್ನು ಕರ್ನಾಟಕ ರಾಜ್ಯ ಎಂಬ ಹೆಸರಿನಲ್ಲಿ ಮುದ್ರಿಸಲಾಗಿದ್ದು, ಗ್ರಾಮಸ್ಥರು ಹೊಸ ಜಮೀನುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಅಡ್ಡಿಯುಂಟಾಗಿದೆ.
ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಬಳ್ಳಾರಿ ಜಿಲ್ಲಾಡಳಿತ ಅವರ ಬೇಡಿಕೆಗಳನ್ನು ನಿರ್ಲಕ್ಷಿಸಿದ್ದು, ಹೀಗಾಗಿ ಲೋಕಸಭೆ ಚುನಾವಣೆ ಬಹಿಷ್ಕಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
ಕೃಷ್ಣಾನಗರದ ಗ್ರಾಮಸ್ಥ ಹಾಗೂ ರೈತ ಮುಖಂಡ ಬಲರಾಮ್ ಎಂ ಕಳೆದ ಒಂದು ವರ್ಷದಿಂದ ಪ್ರತಿ ಭೂ ದಾಖಲೆಗಳಲ್ಲಿ ರಾಜ್ಯ ಸರ್ಕಾರದ ಹೆಸರಿಗೆ ಸಂಬಂಧಿಸಿದಂತೆ ತಮಗಾದ ಗೊಂದಲದ ಬಗ್ಗೆ ಅಳಲು ತೋಡಿಕೊಂಡರು. ಆರ್ಟಿಸಿ ಪ್ರಿಂಟ್ಔಟ್ನಲ್ಲಿ ಆಸ್ತಿ ಕರ್ನಾಟಕ ಸರ್ಕಾರಕ್ಕೆ ಸೇರಿದ್ದು ಎಂದು ತೋರಿಸುತ್ತಿರುವುದರಿಂದ ನಮ್ಮ ಆಸ್ತಿ ಮಾರಾಟ ಮಾಡಲು ಅಥವಾ ಹೊಸದನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದರು.
‘ಆರ್ಟಿಸಿಯಲ್ಲಿ ರಾಜ್ಯ ಸರ್ಕಾರದ ಹೆಸರನ್ನು ತೆಗೆದುಹಾಕುವಂತೆ ಕಂದಾಯ ಸಚಿವರು, ಮುಖ್ಯ ಕಾರ್ಯದರ್ಶಿ ಮತ್ತು ಬಳ್ಳಾರಿ ಜಿಲ್ಲಾಧಿಕಾರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ವೇಳೆ ಜಿಲ್ಲಾಡಳಿತ ತಾಂತ್ರಿಕ ದೋಷ ಎಂದು ತಿಳಿಸಿದ್ದು, ಶೀಘ್ರ ಪರಿಹರಿಸುವುದಾಗಿ ಭರವಸೆ ನೀಡಿದೆ. 1,600ಕ್ಕೂ ಹೆಚ್ಚು ಅರ್ಹ ಮತದಾರರನ್ನು ಒಳಗೊಂಡಿರುವ 2,200 ಜನಸಂಖ್ಯೆಯಿರುವ ಗ್ರಾಮದ ನಾವು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ. ಬುಧವಾರ ಮತ್ತೊಮ್ಮೆ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದು, ವಾರದೊಳಗೆ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅದು ತಪ್ಪಿದಲ್ಲಿ ಯಾವುದೇ ಚುನಾವಣಾಧಿಕಾರಿಗಳು ನಮ್ಮ ಗ್ರಾಮಕ್ಕೆ ಬರಲು ಬಿಡುವುದಿಲ್ಲ’ ಎಂದು ಬಲರಾಮ್ ಎಚ್ಚರಿಕೆ ನೀಡಿದರು.
ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಆರ್ಟಿಸಿಯ ತಾಂತ್ರಿಕ ದೋಷವನ್ನು ಪರಿಹರಿಸುವಂತೆ ಕೃಷ್ಣಾನಗರ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ನಾವು ತಾಂತ್ರಿಕ ದೋಷವನ್ನು ಪರಿಹರಿಸುತ್ತೇವೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಹಬ್ಬವಾದ ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸುತ್ತೇವೆ ಎಂದಿದ್ದಾರೆ.