ಬಳ್ಳಾರಿ,ಏ.13 : ಎಲ್ಲಾ ಅರ್ಹ ಮತದಾರರು ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಗೆ ತಪ್ಪದೇ ಮತದಾನ ಮಾಡಬೇಕು ಎಂದು ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ಸಂಖ್ಯೆ 23 ರ ಭಗತ್ಸಿಂಗ್ ನಗರ, ಹರಿಶ್ಚಂದ್ರ ನಗರ, ಕನ್ನಡ ನಗರ ಮತ್ತು ವಾರ್ಡ್ ಸಂಖ್ಯೆ 19 ರ ಹುಸೇನ್ ನಗರ, ರಾಮಯ್ಯ ಕಾಲೋನಿ ಮತ್ತು ಮಾರುತಿ ಕಾಲೋನಿ ಪ್ರದೇಶದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರುಇ ಮಾತನಾಡಿದರು.
ಮತದಾನ ದಿನದಂದು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾರರು ತಮ್ಮ-ತಮ್ಮ ಹತ್ತಿರದ ಮತಗಟ್ಟೆ ಕುರಿತು ಮಾಹಿತಿ ಹೊಂದಬೇಕು. ಮತದಾನದಿಂದ ಯಾರೂ ಹೊರಗುಳಿಯಬಾರದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಬೇಕು. ಯಾರೂ ಕೂಡ ಯಾವುದೇ ಆಸೆ, ಆಮೀಷಕ್ಕೆ ಒಳಗಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. 2024 ರ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಈ ವೇಳೆ ಬಳ್ಳಾರಿ ಮಹಾನಗರ ಪಾಲಿಕೆ ವಲಯ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿಯವರು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಇತರರು ಹಾಜರಿದ್ದರು.