ಬಳ್ಳಾರಿ,ಏ.20 : ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಯನ್ನು ನಡೆಸಲು ಎಲ್ಲ ರಾಜಕೀಯ ಪಕ್ಷಗಳು ಅಗತ್ಯ ಸಹಕಾರ ನೀಡಬೇಕು ಎಂದು ಬಳ್ಳಾರಿ ಲೋಕಸಭಾ ಕ್ಷೇತ್ರ ಚುನಾವಣೆ ಸಂಬಂಧ ಆಗಮಿಸಿರುವ ಸಾಮಾನ್ಯ ವೀಕ್ಷಕ ಚಂದ್ರಶೇಖರ ಸಖಮುರಿ ಅವರು ಮನವಿ ಮಾಡಿದರು.
ಇಂದು, ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದೆ. ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಹಲವು ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಹಣ, ವಸ್ತುಗಳು, ಮದ್ಯ ಸೇರಿದಂತೆ ಯಾವುದೇ ಸಾಮಗ್ರಿಗಳ ವಿತರಣೆ ಕಂಡುಬಂದಲ್ಲಿ ಅಥವಾ ಚುನಾವಣೆಗೆ ಸಂಬಂಧಿತ ಯಾವುದೇ ದೂರುಗಳಿದ್ದಲ್ಲಿ ತಮ್ಮ ಗಮನಕ್ಕೆ ತರಬಹುದಾಗಿದೆ. ಒಟ್ಟಾರೆ ಕ್ಷೇತ್ರದಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆ ನಡೆಸಲು ಚುನಾವಣಾ ಆಯೋಗದ ಪ್ರತಿನಿಧಿಯಾಗಿ ನಾನು ಇಲ್ಲಿ ಕಾರ್ಯ ನಿರ್ವಹಿಸಲು ಬಂದಿರುವೆ. ಸುಗಮ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮಾತನಾಡಿ, ಚುನಾವಣೆಯ ಪ್ರತಿಯೊಂದು ಪ್ರಕ್ರಿಯೆಗಳ ಬಗ್ಗೆಯೂ ನಾವು ರಾಜಕೀಯ ಪಕ್ಷಗಳ ಗಮನಕ್ಕೆ ತರುವ ಮೂಲಕ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಚುನಾವಣೆ ಸಂಬಂಧ ಯಾವುದೇ ನಿರ್ದಿಷ್ಟ ದೂರುಗಳಿದ್ದಲ್ಲಿ 1950 ಸಹಾಯವಾಣಿಗೆ ಅಥವಾ ಸಿ-ವಿಜಿಲ್ ಆಪ್ ಮೂಲಕ ಸಲ್ಲಿಸಬಹುದಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.