ಗಂಗಾವತಿ: ಜೈಶ್ರೀರಾಮ್ ಎಂದು ಕೂಗಿದ ಯುವಕನ ವಿರುದ್ಧ ಹಲ್ಲೆ ನಡೆದು ತೀವ್ರ ಗಾಯಗೊಂಡು ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕಳೆದ ರಾತ್ರಿ ನಡೆದಿದೆ.
ಬೆಂಗಳೂರಿನಲ್ಲಿ ಮೊನ್ನೆ ರಾಮ ನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗಿದವರ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಸಂದರ್ಭದಲ್ಲೇ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೂಡ ಅಂಥದ್ದೇ ಘಟನೆ ವರದಿಯಾಗಿದೆ. ಗಂಗಾವತಿಯ ಶ್ರೀರಾಮನಗರದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗಿದ ಯುವಕನ ಮೇಲೆ ಸುಮಾರು 20 ಮಂದಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ ಎಂದು ಹೇಳಲಾಗಿದೆ.
ನಡೆದ ಘಟನೆಯೇನು?: ಗಂಗಾವತಿಯ ಶ್ರೀರಾಮನಗರದ ಸನ್ ಶೈನ್ ಬಾರ್ನಲ್ಲಿ ನಿನ್ನೆ ಮಂಗಳವಾರ ರಾತ್ರಿ ಮದ್ಯ ಸೇವನೆಯ ವೇಳೆ ಕುಮಾರ್ ರಾಠೋಡ್ ಎಂಬಾತ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಯುವಕರು ಏಕಾಏಕಿ ಒಳಗೆ ನುಗ್ಗಿ ಬಂದು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಗಾಯಾಳು ಕುಮಾರ್ ರಾಠೋಡ್ ನನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.