ಚಿತ್ರದುರ್ಗ: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಸೋಮವಾರ ಮತ್ತೆ ಜೈಲು ಪಾಲಾಗಿದ್ದಾರೆ.
ಫೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಕಳೆದ ಮಂಗಳವಾರ ರದ್ದು ಮಾಡಿತ್ತು ಮತ್ತು ಒಂದು ವಾರದಲ್ಲಿ ನ್ಯಾಯಾಂಗ ಬಂಧನಕ್ಕೆ ತೆರಳುವಂತೆ ಆರೋಪಿಗೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ಆದೇಶದಂತೆ ಮುರುಘಾ ಶ್ರೀ ಇಂದು ಚಿತ್ರದುರ್ಗದ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ಗೆ ಶರಣಾಗಿದ್ದಾರೆ. ಆರೋಪಿ ಶ್ರೀಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಮೇ 27ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
2022 ಆಗಸ್ಟ್ 31 ರಂದು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಸೆಪ್ಟೆಂಬರ್ 1ರಂದು ಶ್ರೀಗಳ ಬಂಧನವಾಗಿತ್ತು. ಸುಮಾರು 14 ತಿಂಗಳ ಕಾಲ ಜೈಲಿನಲ್ಲಿದ್ದ, ಶ್ರೀಗಳು 2023 ನವೆಂಬರ್ 16ರಂದು ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗೆ ಬಂದಿದ್ದರು.