ಬಳ್ಳಾರಿ, ಏ.30: ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಒತ್ತಡದ ನಡುವೆಯೂ ಬಳ್ಳಾರಿ ನಗರದ ನಗರಾಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿರುವೆ, ಹೀಗಾಗಿ ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಬಳ್ಳಾರಿ ನಗರದ 34ನೇ ವಾರ್ಡಿನ ಭತ್ರಿ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರ ಪರ ಮತ ಯಾಚಿಸಿದರು.
ವಾರ್ಡ್ ನಂಬರ್ 34 ರಲ್ಲಿ ಈವರೆಗೆ ಒಟ್ಟು 16 ಕೋಟಿ ರೂ. ಗಳ ವಿವಿಧ ಕಾಮಗಾರಿಗೆ ಹಣ ಮಂಜೂರು ಮಾಡಿಸಲು ಕ್ರಮ ಕೈಗೊಂಡಿದ್ದೇನೆ. ಈಗಾಗಲೇ ಕೆಲವು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ. ಇನ್ನೂ ಕೆಲವು ಕಾಮಗಾರಿಗಳಿಗೆ ಅನುದಾನ ಬಿಡುಗಡೆಯಾಗಬೇಕಿದೆ ಎಂದು ಹೇಳಿದರು.
ಬಳ್ಳಾರಿ ನಗರದ ನಿವಾಸಿಗಳಿಗೆ 5 ಸಾವಿರ ಪಟ್ಟಾಗಳು ಸಿದ್ಧಗೊಂಡಿವೆ. ಲೋಕಸಭಾ ಚುನಾವಣೆಯ ನಂತರ ಪಟ್ಟಾ ವಿತರಿಸಲಾಗುವುದು ಎಂದು ತಿಳಿಸಿದರು.
ವಿಧಾನಸಭೆ ಚುನಾವಣೆ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರು ಕುಹಕವಾಡಿದ್ದರು, ಯೋಜನೆಗಳ ಜಾರಿ ಅಸಂಭವ ಎಂದಿದ್ದರು. ಆದರೆ ನಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ 9 ತಿಂಗಳಲ್ಲಿ ಐದು ಮಹತ್ತರವಾದ ಯೋಜನೆಗಳನ್ನು ಜಾರಿಗೆ ತಂದು ಐತಿಹಾಸಿಕ ದಾಖಲೆ ಮಾಡಿದೆ ಎಂದು ಶಾಸಕ ಭರತ್ ರೆಡ್ಡಿ ಹೇಳಿದರು.
ಜನರ ಕಷ್ಟಕ್ಕೆ ನೆರವಾಗುವ ಪಕ್ಷ ಕಾಂಗ್ರೆಸ್, ಲೋಕಸಭಾ ಚುನಾವಣೆಗೆ ನಿಂತಿರುವ ಬಿಜೆಪಿ ಅಭ್ಯರ್ಥಿಯ ಹಾಗೆ ನಮ್ಮ ಅಭ್ಯರ್ಥಿ ಸುಳ್ಳು ಹೇಳುವವರಲ್ಲ, ನಾಲ್ಕು ಸಲ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದ ತುಕಾರಾಂ ಸಜ್ಜನ ರಾಜಕಾರಣಿ, ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಪಾಲಿಕೆಯ ಸದಸೂಯೆ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಮಾತನಾಡಿ; ನಮ್ಮ ಪಕ್ಷ ವಿಧಾನಸಭೆ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಿದೆ, 25 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕೆಲಸಗಳು ಕಾಂಗ್ರೆಸ್ ಪಕ್ಷ ಪಾಲಿಕೆ ಹಾಗೂ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆಗಿವೆ. ಹೀಗಾಗಿ ನಮ್ಮ ಅಭ್ಯರ್ಥಿಯಾದ ತುಕಾರಾಂ ಅವರಿಗೆ ಮತ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭ ಡಿಸಿಸಿ ನೂತನ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಆಂಜನೇಯಲು, ವಿಷ್ಣು ಬೋಯಪಾಟಿ, ಶೋಭಾ ಹಾಗೂ ಸ್ಥಳೀಯ ಮುಖಂಡರಾದ ಲತಾವರಂ ಮಲ್ಲಿ, ಲಾಲಮೋಹನ್, ಗುರ್ರಂ ಮೋಹನದಾಸ್, ನೆಕ್ಕಲಪೋಡಿ ಹರಿಬಾಬು, ಚೇರಕುರಿ ಅನೂಪ್, ಅಭಿರಾಂ, ಕಟ್ಟಾ ರಘು ಮೊದಲಾದವರು ಹಾಜರಿದ್ದರು.