ಬೆಂಗಳೂರು(ಮೇ.04) ಕರ್ನಾಟಕದಲ್ಲಿ 2ನೇ ಹಂತದ ಮತದಾನಕ್ಕೆ ಕೆಲವೇ ದಿನ ಮಾತ್ರ ಬಾಕಿ. ಆದರೆ ರಾಜ್ಯದಲ್ಲಿ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಿಂದ ಚುನಾವಣೆ ಸಪ್ಪೆಯಾಗಿದೆ. ಇದೀಗ ಈ ಪ್ರಕರಣ ಸಂಬಂಧ ಶಾಸಕ ಹೆಚ್ಡಿ ರೇವಣ್ಮ ಅರೆಸ್ಟ್ ಆಗಿದ್ದಾರೆ. ಕಿಡ್ನಾಪ್ ಪ್ರಕರಣ ಸಂಬಂಧ ದಾಖಲಾಗಿದ್ದ ದೂರಿನ ಆಧಾರದಲ್ಲಿ ರೇವಣ್ಣ ಅವರನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ರೇವಣ್ಣ ಬಂಧನ ಹೆಚ್ಡಿ ಕುಟುಂಬವನ್ನೇ ಅಲುಗಾಡಿಸಿದೆ. ಇತ್ತ ವಿದೇಶಕ್ಕೆ ಹಾರಿದ್ದ ಪುತ್ರ ಪ್ರಜ್ವಲ್ ರೇವಣ್ಣ ಇದೀಗ ದುಬೈನಿಂದ ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲು ಸಜ್ಜಾಗಿದ್ದಾರೆ. ಇತ್ತ ಎಸ್ಐಟಿ ಅಧಿಕಾರಿಗಳು ಮಂಗಳೂರ ವಿಮಾನ ನಿಲ್ದಾಣದಲ್ಲೇ ಪ್ರಜ್ವಲ್ ರೇವಣ್ಣ ಬಂಧಿಸಲು ಸಿದ್ಧತೆ ನಡೆಸಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ.
ಹೆಚ್ಡಿ ರೇವಣ್ಣ ಬಂಧನವಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಕುಸಿದು ಹೋಗಿದ್ದಾರೆ. ತನ್ನ ಸಂಪೂರ್ಣ ಶಕ್ತಿಯಾಗಿದ್ದ ರೇವಣ್ಣ ಬಂಧನದ ಬೆನ್ನಲ್ಲೇ ಎಸ್ಐಟಿ ಶರಣಾಗಲು ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದಕ್ಕಾಗಿ ದುಬೈನಿಂದ ತಕ್ಷಣಕ್ಕೆ ಲಭ್ಯವಿದ್ದ ಮಂಗಳೂರು ವಿಮಾನದಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.
ಮಂಗಳೂರಿನಿಂದ ಬೆಂಗಳೂರಿಗ ಆಗಮಿಸಿ ಎಸ್ಐಟಿ ಮುಂದೆ ಶರಣಾಗಲು ಪ್ರಜ್ವಲ್ ರೇವಣ್ಣ ನಿರ್ಧರಿಸಿದ್ದಾರೆ. ಆದರೆ ಎಸ್ಐಟಿ ಅಧಿಕಾರಿಗಳು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅರೆಸ್ಟ್ ಮಾಡಲು ಸಿದ್ಥತೆ ನಡೆಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಪ್ರಜ್ವಲ್ ರೇವಣ್ಣ ಹಾಗೂ ಹೆಚ್ಡಿ ರೇವಣ್ಣ ಕುಟುಂಬಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ಮೂರು ದೂರುಗಳು ದಾಖಲಾಗಿದೆ. ಈ ಪೈಕಿ ಹೊಳೆನರಸೀಪುರದಲ್ಲಿ ರೇವಣ್ಣ ಕುಟುಂಬದ ಮನೆಗೆಲಸದಾಕೆ ನೀಡಿದ್ದ ದೂರಿನಲ್ಲಿ ಹೆಚ್ಡಿ ರೇವಣ್ಣ ಎ1 ಆರೋಪಿಯಾಗಿದ್ದು, ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದಾರೆ. ಇದೀಗ ರೇವಣ್ಣ ಬಂಧನಕ್ಕೆ ಕಾರಣವಾಗಿರುವುದು ಅಪಹಕರಣ ಪ್ರಕರಣ.
ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತೆಯನ್ನು ಅಪಹರಣ ಮಾಡಲಾಗಿದೆ ಅನ್ನೋ ದೂರು ದಾಖಲಾಗಿತ್ತು. ಸಂತ್ರಸ್ತೆ ಪುತ್ರ ಈ ಕುರಿತು ದೂರು ನೀಡಿದ್ದ. ರೇವಣ್ಣ ಹಾಗೂ ಅವರ ಆಪ್ತರ ವಿರುದ್ಧ ದೂರು ದಾಖಲಾಗಿತ್ತು. ಇತ್ತ ನಿರೀಕ್ಷಣಾ ಜಾಮೀನು ಅರ್ಜಿ ಸೆಶನ್ ಕೋರ್ಟ್ನಲ್ಲಿ ವಜಾಗೊಂಡಿತ್ತು. ಇದರ ಬೆನ್ನಲ್ಲೇ ಎಸ್ಐಟಿ ತಂಡ ಮಾಜಿ ಪ್ರಧಾನಿ ದೇವೇಗೌಡರ ಮನೆಗೆ ದೌಡಾಯಿಸಿತ್ತು. ಬಳಿಕ ದೇವೇಗೌಡರ ಮನೆಯಲ್ಲಿದ್ದ ಹೆಚ್ಡಿ ರೇವಣ್ಣ ಬಂಧಿಸಿದ್ದರು.