ಬೆಂಗಳೂರು: ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ ಅವರಿಗೆ ಕೋರ್ಟ್ 7 ದಿನ ಕಾಲ ನ್ಯಾಯಂಗ ಬಂಧನಕ್ಕೆ ಆದೇಶಿಸಿದೆ.
ಎಸ್ ಐಟಿ ಕಸ್ಟಡಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ರೇವಣ್ಣರನ್ನು ಬೆಂಗಳೂರಿನ 17ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಲಾಗಿದ್ದು ನ್ಯಾಯಧೀಶರು ಮೇ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿದ ಹಿನ್ನೆಲೆಯಲ್ಲಿ ಕೋರ್ಟ್ ಹಾಲ್ ನಿಂದ ಹೊರಬಹುವಾಗ ರೇವಣ್ಣ ಕಣ್ಣೀರು ಹಾಕಿದರು. ಇನ್ನ ಎಸ್ಐಟಿ ಅಧಿಕಾರಿಗಳು ರೇವಣ್ಣರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದು, ರೇವಣ್ಣ ಆಪ್ತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಇಂದು ನಡೆಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ. ಹೀಗಾಗಿ ರೇವಣ್ಣ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಒಂದು ವೇಳೆ ಜಾಮೀನು ಸಿಗದ್ದಿದ್ದರೆ ಮೇ 14ರವರೆಗೆ ರೇವಣ್ಣ ಜೈಲಿನಲ್ಲೇ ಇರಬೇಕಾಗುತ್ತದೆ.