ಬೆಂಗಳೂರು: ಇಚ್ಛಾಶಕ್ತಿ, ಛಲ ಹಾಗೂ ದೃಢಸಂಕಲ್ಪವಿದ್ದರೆ ಅಸಾಧ್ಯವಾದುದ್ದನ್ನೂ ಕೂಡ ಸಾಧಿಸಬಹುದು ಎಂಬುದನ್ನು ಬೆಂಗಳೂರಿನ ಈ ತಾಯಿ ಮತ್ತು ಮಗನ ಜೋಡಿ ತೋರಿಸಿಕೊಟ್ಟಿದೆ.
42 ವರ್ಷದ ನೀಲಂ ಗೋಯಲ್ ಮತ್ತು ಅವರ ಮಗ ಕನ್ಹಾ ಅಬೋಟಿ (11) ಹತ್ತಿ 5,364 ಮೀಟರ್ ಎತ್ತರದಲ್ಲಿರುವ ಎವರೆಸ್ಟ್ ಬೇಸ್ಕ್ಯಾಂಪ್ ಏರಿ ಗುರಿ ಸಾಧಿಸಿದ್ದಾರೆ.
ಈ ಮೂಲಕ ಟ್ರೆಕ್ಕಿಂಗ್ ಕೇವಲ ಏಕಾಂಗಿ ಚಾರಣ ಮಾಡುವ ಅಥವಾ ಯುವಕರಿಗೆ ಮಾತ್ರ ಸಾಹಸ ಕ್ರೀಡೆಯಲ್ಲ, ಕುಟುಂಬ ಮತ್ತು ಬಾಂಧವ್ಯದ ಕ್ರೀಡೆ ಕೂಡ ಹೌದು ಎಂಬುದನ್ನು ತಾಯಿ-ಮಗನ ಜೋಡಿ ತೋರಿಸಿಕೊಟ್ಟಿದೆ.
ಬೇಸ್ ಕ್ಯಾಂಪ್ ಏರಿದ ಕಿರಿಯ ಹುಡುಗರಲ್ಲಿ ಕನ್ಹಾ ಕೂಡ ಇದೀಗ ಒಬ್ಬರಾಗಿದ್ದಾರೆ. 2023 ರಲ್ಲಿ ಕರಾಟೆಯಲ್ಲಿ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಕನ್ಹಾ ಅಬೋಟಿಗೆ ರಾಜ್ಯದ ಮುಖ್ಯಮಂತ್ರಿಗಳು ದಸರಾ ಕ್ಯಾಂಪ್ ಚಿನ್ನದ ಪದಕವನ್ನು ನೀಡಿದ್ದರು.
2020ರ ಫೆಬ್ರವರಿ ತಿಂಗಳಿನಲ್ಲಿ ಮೊದಲ ಕೋವಿಡ್ ಅಲೆ ಶುರುವಾಗಿತ್ತು. ಈ ವೇಳೆ ನನಗೆ ಸ್ಲಿಪ್ ಡಿಸ್ಕ್ ಎದುರಾಗಿತ್ತು. ನಂತರ, ದೈಹಿಕ ಚಟುವಟಿಕೆ ನಡೆಸಲು ಕಷ್ಟಕವಾಗಿತ್ತು. ವೈದ್ಯರು ನಿಧಾನಗತಿಯಲ್ಲಿ ಚಟುವಟಿಕೆ ಆರಂಭಿಸುವಂತೆ ಸಲಹೆ ನೀಡಿದ್ದರು. ನಾನು ಮತ್ತು ನನ್ನ ಮಗ ಎವರೆಸ್ಟ್ ಏರಲು ಬಯಸಿದ್ದೆವು. ಹೀಗಾಗಿ ನಾವಿಬ್ಬರೂ ಒಟ್ಟಿಗೆ ಪ್ರಾಕ್ಟೀಸ್ ಶುರು ಮಾಡಿದ್ದೆವು. ದೈಹಿಕ ಶಕ್ತಿಯನ್ನು ಹೆಚ್ಚಿಸಲು ನಾವು ಪ್ರತಿದಿನ ನಡೆಯುತ್ತಿದ್ದೆವು. ಮೆಟ್ಟಿಲುಗಳನ್ನು ಏರಿಳಿಯುತ್ತಿದ್ದೆವು. ಎವರೆಸ್ಟ್ ಬೇಸ್ ತಲುಪುವ ನಮ್ಮ ಗುರಿ ಸಾಧಿಸುವ ಸಲುವಾಗಿ ಇದಕ್ಕೆ ತರಬೇತಿ ಎಂಬಂದೆ ಕರ್ನಾಟಕದ ಕುಮಾರ ಪರ್ವತ ಮತ್ತು ತಡಿಯಂಡಮೋಲ್ ಮತ್ತು ಡೆಹ್ರಾಡೂನ್ನ ಇತರ ಬೆಟ್ಟಗಳಲ್ಲಿ ಚಾರಣ ಮಾಡಿದ್ದೆ ಎಂದು ನೀಲಂ ಹೇಳಿದ್ದಾರೆ.
ಟ್ರೆಕ್ಕಿಂಗ್ ನಮಗೆ ಸಂತೋಷವನ್ನು ನೀಡಿತು. ಮಗನೊಂದಿಗಿನ ಬಾಂಧವ್ಯ ಹೆಚ್ಚಾಗುವಂತೆ ಮಾಡಿತು. ಇದು ನಮ್ಮ ಗುರಿ ಸಾಧಿಸಲು ಸಹಾಯ ಮಾಡಿತು. ಮುಂದಿನ ದಿನಗಳಲ್ಲಿ ಪರ್ವತದ ಮೇಲೇರಲು ಬಯಸುತ್ತಿದ್ದೇವೆಂದು ತಿಳಿಸಿದ್ದಾರೆ. ನೀಲಂ ಮತ್ತು ಅವರ ಪುತ್ರ ಏಪ್ರಿಲ್ 21 ರಿಂದ ಮೇ 7 ರವರೆಗೆ ಹಿಮಾಲಯದ ಬೇಸ್ ಕ್ಯಾಂಪ್ಗೆ ಚಾರಣಕ್ಕೆ ತೆರಳಿದ್ದ ಎಂಟು ಜನರ ಗುಂಪಿನ ಭಾಗವಾಗಿದ್ದರು.
ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಮಲೆನಾಡಿನ ಮತ್ತು ಪ್ರಕೃತಿಯ ಪರಿಚಯ ಮಾಡಿಸುವುದರಿಂದ ಅವರ ದೈಹಿಕ ಆರೋಗ್ಯ, ವ್ಯಕ್ತಿತ್ವ ಬೆಳವಣಿಗೆ, ವೈಯಕ್ತಿಕ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಟ್ರೆಕ್ನೋಮಾಡ್ಸ್ ಸಂಸ್ಥಾಪಕ ಹಾಗೂ ಸಿಇಒ ನವೀನ್ ಮಲ್ಲೇಶ್ ಅವರು ಹೇಳಿದ್ದಾರೆ.