ಬೆಂಗಳೂರು, ಜೂನ್ 03: ರಾಜ್ಯ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರೂ. ಅಕ್ರಮವಾಗಿ ವರ್ಗಾವಣೆ ಪ್ರಕರಣದ ತನಿಖೆಯನ್ನು ಎಸ್ಐಟಿ ಅಧಿಕಾರಿಗಳು ಚುರುಕುಗೊಳಿಸಿದ್ದು, ಬೆಂಗಳೂರಿನಲ್ಲಿ ಇಂದು ಕಾಂಗ್ರೆಸ್ ಮುಖಂಡ ನೆಕ್ಕಂಟಿ ನಾಗರಾಜ್ನನ್ನು ವಶಕ್ಕೆ ಪಡೆದುಕೊಂಡು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ನೆಕ್ಕಂಟಿ ನಾಗರಾಜ್ ಅವರು ವಾಲ್ಮೀಕಿ ಕಚೇರಿಗೆ ಹೋಗಿ ಅಧಿಕಾರಿಗಳು ಕಡೆಯಿಂದ ಫೋನ್ ನಲ್ಲಿ ಮಾತನಾಡಿಸಿದ್ದ. ಈ ಹಿನ್ನೆಲೆಯಲ್ಲಿ ಇದೀಗ ಸದ್ಯ ನೆಕ್ಕಂಟಿ ನಾಗರಾಜ್ ನನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಇನ್ನು ನಾಳೆ ನ್ಯಾಯಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರೂ.ಗಳನ್ನು ಅಕ್ರಮವಾಗಿ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿನ ಆರ್ಬಿಎಲ್ ಬ್ಯಾಂಕ್ನಲ್ಲಿನ ಖಾತೆಗಳಿಗೆ ವರ್ಗಾವಣೆ ಮಾಡಿರುವ ಹಗರಣದಲ್ಲಿ ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಮತ್ತು ಲೆಕ್ಕಾಧಿಕಾರಿ ಪರಶುರಾಮ್ ಜಿ.ದುರುಗಣ್ಣವರ್ ಅವರನ್ನು ವಿಶೇಷ ತನಿಖಾ ತಂಡವು (ಎಸ್ಐಟಿ) ಶನಿವಾರ ಬಂಧಿಸಿದೆ.
ಇನ್ನು ಪರಾರಿ ಯತ್ನದಲ್ಲಿದ್ದ ಪದ್ಮನಾಭ ಹಾಗೂ ಪರಶುರಾಮ್ ಅವರನ್ನು ಬಂಧಿಸಿ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ತನಿಖಾಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ. ನಿಗಮದ ಖಾತೆಯಲ್ಲಿದ್ದ 187.33 ಕೋಟಿ ರೂ.ಗಳ ಅಕ್ರಮ ವರ್ಗಾವಣೆ ರಹಸ್ಯ ಭೇದಿಸುವ ಪ್ರಯತ್ನ ನಡೆಸಿದ್ದಾರೆ.
ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಷ್ ಖರ್ಬೀಕರ್ ನೇತೃತ್ವದ ಎಸ್ಐಟಿ ತಂಡವು ಹಗರಣದ ತನಿಖೆಯನ್ನು ಚುರುಕುಗೊಳಿಸಿರುವುದು ನಿಗಮದ ಇತರೆ ಅಧಿಕಾರಿಗಳು ಹಾಗೂ ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಸಿಬ್ಬಂದಿಗೆ ನಡುಕ ಹುಟ್ಟಿಸಿದೆ.