ಲೋಕಸಭೆ ಚುನಾವಣೆಯಲ್ಲಿನ ಸಾಧನೆಯನ್ನು ವಿಶ್ಲೇಷಿಸಲು 8 ರಾಜ್ಯಗಳಿಗೆ ಕಾಂಗ್ರೆಸ್ ಸತ್ಯಶೋಧನಾ ಸಮಿತಿ ರಚಿಸಿದೆ. ಮಧುಸೂದನ್ ಮಿಸ್ತ್ರಿ, ಗೌರವ್ ಗೊಗೊಯ್, ಹಿಬಿ ಈಡೆನ್ ತಂಡದ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿದೆ. ಮಧುಸೂಧನ್ ಮಿಸ್ತ್ರಿ, ಗೌರವ್ ಗೊಗೊಯ್ ಮತ್ತು ಹಿಬಿ ಈಡನ್ ಅವರಿಗೆ ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯ ಪ್ರದರ್ಶನವನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿ ವಹಿಸಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಏನು ತಪ್ಪಾಗಿದೆ ಎಂಬುದನ್ನು ವಿಶ್ಲೇಷಿಸಲು ಕಾಂಗ್ರೆಸ್ ಇಂದು 6 ಸತ್ಯಶೋಧನಾ ಸಮಿತಿಗಳನ್ನು ರಚಿಸಿದೆ. ಅಲ್ಲಿ ಕಾಂಗ್ರೆಸ್ ಪಕ್ಷವು ಉತ್ತಮ ಪ್ರದರ್ಶನ ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಿರೀಕ್ಷಿತ ಮಟ್ಟದ ಮತಗಳು ಸಿಕ್ಕಿರಲಿಲ್ಲ.
ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ದೆಹಲಿ, ತೆಲಂಗಾಣ ಮತ್ತು ಹರಿಯಾಣ ರಾಜ್ಯಗಳಲ್ಲಿ ಏನು ತಪ್ಪಾಗಿದೆ ಎಂಬುದನ್ನು ಕಂಡುಹಿಡಿಯಲು ಹಿರಿಯ ನಾಯಕರ ಸಮಿತಿಗಳನ್ನು ರಚಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ತಿಳಿಸಿದ ಕೆಲವೇ ದಿನಗಳಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಸಮಿತಿಗಳನ್ನು ರಚಿಸಿದ್ದಾರೆ.