ಬೆಂಗಳೂರು, ಜೂನ್ 24: ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಕೇಸ್ನ್ನು ಸಿಐಡಿಗೆ ವಹಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬೆಂಗಳೂರಿನಲ್ಲಿ ಕೊಲೆಯಾಗಿದ್ದ ಪ್ರಬುದ್ಧಾಳ ಕೇಸ್ ಸದ್ಯ ಸಿಐಡಿ ತನಿಖೆಗೆ ನೀಡಲಾಗಿದೆ. ಮೃತಳ ತಾಯಿ ಸೌಮ್ಯಾ ಅವರು ಖುದ್ದು ಸಿಎಂ ಭೇಟಿಯಾಗಿ ಮನವಿ ಮಾಡಿದ್ದರು. ಅವರ ದೂರಿನ ಮೇರೆಗೆ ಸಿಐಡಿಗೆ ವಹಿಸಲು ಡಿಜಿ&ಐಜಿಪಿ ಅಲೋಕ್ ಮೋಹನ್ಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಸಿಎಂ ಭೇಟಿ ಬಳಿಕ ಕೊಲೆಯಾಗಿದ್ದ ಪ್ರಬುದ್ಧಾ ತಾಯಿ ಸೌಮ್ಯಾ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಪದವಿ ಓದುತ್ತಿದ್ದ ನನ್ನ ಮಗಳನ್ನು ಯುವಕನೊಬ್ಬ ಕೊಲೆ ಮಾಡಿದ್ದಾನೆ. ಕೆಲವು ಅನುಮಾನಗಳಿದ್ದವು, ಆ ಯುವಕನಿಗೆ ಬೇಲ್ ಕೂಡ ಸಿಕ್ಕಿತ್ತು. ಆರೋಪಿಗೆ ಬೇಲ್ ಸಿಕ್ಕಿದೆ ಅಂತಾ ನಾವು ಸುಮ್ಮನಿದ್ದರೆ ಸರಿ ಹೋಗಲ್ಲ. ಹಾಗಾಗಿ ಸಿಐಡಿಗೆ ಕೊಡಬೇಕು ಅಂತಾ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆವು ಎಂದರು.
ನನ್ನ ಮನವಿ ಮೇರೆಗೆ ಸಿಎಂ ಸಿದ್ದರಾಮಯ್ಯನವರು ಸಿಐಡಿಗೆ ವಹಿಸಿದ್ದಾರೆ. ಹೆಣ್ಣುಮಕ್ಕಳು ನಿರಾಕರಿಸಿದರೆ ಅವರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಸಮಾಜಕ್ಕೆ ಯಾವ ಸಂದೇಶ ಸಿಗುತ್ತಿದೆ ಅಂತಾ ನನಗೆ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಬೆಂಗಳೂರಿನ ಬಿ.ಎಂ.ಎಸ್. ಮಹಿಳಾ ಕಾಲೇಜಿನಲ್ಲಿ ದ್ವಿತೀಯ ಬಿಬಿಎ ಮಾಡುತ್ತಿದ್ದ ಪ್ರಬುದ್ಧಳನ್ನು ಮೇ 15ರ ಸಂಜೆ ಮನೆಯಲ್ಲೇ ಭೀಕರ ಹತ್ಯೆ ಮಾಡಲಾಗಿತ್ತು. ಕತ್ತು ಹಾಗೂ ಕೈ ಕೊಯ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಮೊದಲು ಪೊಲೀಸರು ಪರಿಗಣಿಸಿದ್ದರು. ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ ಎಂದು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.