ಬಳ್ಳಾರಿ: ಜು. 06: ನಗರದ ಉಪ ನೋಂದಣಾಧಿಕಾರಿ ಕಚೇರಿ ಆವರಣದಲ್ಲಿನ ಬರಹಗಾರರ ಮಳಿಗೆಗಳ ತೆರವು ಕಾರ್ಯಾಚರಣೆಗೆ ಸೂಚಿಸಿದ ಬೆನ್ನಲ್ಲೇ ಮಾಲೀಕರಿಂದ ವಿರೋಧ ವ್ಯಕ್ತವಾಗಿದ್ದು, ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಶನಿವಾರ ಕಚೇರಿ ಎದುರು ಧರಣಿ ನಡೆಸಲಾಯಿತು. ಕಚೇರಿ ಆವರಣದಲ್ಲಿ ಅಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ಇದರ ಜೊತೆಗೆ ಕಚೇರಿಗೆ ಆಗಮಿಸುವ ಜನರು, ಅಡ್ಡಾದಿಡ್ಡಿಯಾಗಿ ರೋಡ್ ನಲ್ಲೇ ವಾಹನ ನಿಲ್ಲಿಸುತ್ತಿದ್ದು, ಇದರಿಂದ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ದೂರುಗಳು ಬಂದ ಹಿನ್ನೆಲೆ ನಗರ ಶಾಸಕ ನಾನಾ ಭರತ್ ರೆಡ್ಡಿ ಅವರು ದಿಢೀರ್ ಕಚೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿ, ಜನರಿಗೆ ಅನುಕೂಲಮಾಡಿಕೊಡಿ, ಕೂಡಲೇ ಅವರಿಗೆ ನೋಟಿಸ್ ನೀಡಿ ಎಂದು ಸೂಚಿಸಿದ್ದರು. ಈ ಹಿನ್ನೆಲೆ ಉಪ ನೋಂದಣಾಧಿಕಾರಿಗಳು ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು, ಆತಂಕಗೊಂಡ ಮಾಲೀಕರು ಗೊಂದಲಕ್ಕಿಡಗಿದ್ದರು.
ಕಚೇರಿ ಎದುರು ಧರಣಿ: ಕಚೇರಿ ಆವರಣದಲ್ಲಿನ ಮಳಿಗೆಗಳನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬೇಡಿ, ಈ ತೀರ್ಮಾನ ಸರಿಯಲ್ಲ, ಕೂಡಲೇ ಈ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ನೇತೃತ್ವದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಲಾಯಿತು. ಕಚೇರಿ ಎದುರು ಕುಳಿತ ಶ್ರೀರಾಮುಲು ಅವರು, ಈ ಪ್ರಕ್ರಿಯೆಯನ್ನು ಇಲ್ಲಿಗೆ ಕೈಬಿಡುವವರೆಗೂ ಸ್ಥಳ ಬಿಟ್ಟು ಕದಲೋಲ್ಲ ಎಂದು ಪಟ್ಟು ಹಿಡಿದರು. ಸ್ಥಳದಲ್ಲಿ ಜಮಾಯಿಸಿದ್ದ ಸುಮಾರು ಬರಹಗಾರರು ಅಧಿಕಾರಿಗಳ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಶ್ರೀರಾಮುಲು ಅವರು ಮಾತನಾಡಿ, ಕಳೆದ 49 ವರ್ಷಗಳಿಂದ ಪತ್ರ ಬರಹಗಾರರು ಇದೇ ಸ್ಥಳದಲ್ಲಿ ಮಳಿಗೆ ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ, ಏಕಾ ಏಕಿ ತೆರವುಗೊಳಿಸಿದರೆ ಅವರ ಪಡೆನು ಎಂದು ಪ್ರಶ್ನಿಸಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸರ್ಕಾರದ ಆದೇಶದ ಮೇರೆಗೆ ನಾವು ಅನಧಿಕೃತ ಮಳಿಗೆಗಳನ್ನು ಮಾತ್ರ ತೆರವುಗೊಳಿಸುತ್ತಿದ್ದೇವೆ ಎಂದರು. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡೋಲ್ಲ, ಇದೆ ವೃತ್ತಿಯನ್ನು ನಂಬಿದ ಅವರ ಜೀವನ ಅತಂತ್ರವಾಗಲಿದೆ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಗೋವಿಂದರಾಜಲು, ಮುಖಂಡ ಕೆ.ಎಸ್.ದಿವಾಕರ್, ಓಬಳೇಶ್ ಸೇರಿದಂತೆ ಇತರರು ಇದ್ದರು.