ಬಳ್ಳಾರಿ. ಜು06 : ಇಂದು ಬೆಳಿಗ್ಗೆ ಕಛೇರಿ ಆರಂಭ ಸಮಯದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಕಛೇರಿ ಮೇಲೆ ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲಿಸಿ ಅಧಿಕಾರಿಗಳನ್ನು ತೀವ್ರವಾಗಿ ವಿಚಾರಣೆ ನಡೆಸಿದ ಘಟನೆ ನಡೆದಿದೆ.
ಇಂದು ಬೆಳ್ಳಂ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪಾಲಿಕೆಯ ಕಂದಾಯ ಅಧಿಕಾರಿ ಮಹಮ್ಮದ್ ಗೌಸ್, ಸಹಾಯ ಕಾರ್ಯನರ್ವಾಹಕ ಅಭಿಯಂತರರಾದ ಮಹಾದೇವ ಕಟ್ಟಿಮನಿ ಮತ್ತು ಜೂನೀಯರ್ ಇಂಜಿನೀಯರ್ ವಿರೂಪಾಕ್ಷಪ್ಪ ಹಾದಿಮನಿ ಇವರನ್ನು ಛೇಂಬರ್ ಗೆ ತೆರಳಿ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸುತ್ತಾ ತೀವ್ರ ವಿಚಾರಣೆ ನಡೆಸಿದರು. ಈ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪಾಲಿಕೆ ಅಧಿಕಾರಿಗಳ ತಬ್ಬಿಬಾದ ಪ್ರಸಂಗ ಜರುಗಿತು.
ಬಳ್ಳಾರಿಯ ರಾಯಲ್ ಸರ್ಕಲ್ ನಲ್ಲಿರುವ ಮಹಾನಗರ ಪಾಲಿಕೆ ಕಛೇರಿಯಲ್ಲಿ ಯೋಜನಾ ಅಧಿಕಾರಿಗಳಾಗಿ ಕೆಲಸ ಮಾಡುತ್ತಿರುವ ಮಹಾದೇವ ಕಟ್ಟಿಮನಿಯವರು ಬಡವಾಣೆ ನಿರ್ಮಾಣಗಾರರಿಂದ ಲಂಚ ಕೇಳಿದ ಆರೋಪದ ಮೇಲೆ ದಿಢೀರ್ ದಾಳಿ ನಡೆಸಿದ್ದು, ಪಾಲಿಕೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬೇದಿಸಿದ್ದಾರೆ.
ಪಾಲಿಕೆಯಲ್ಲಿ ಬಹಳ ದಿನಗಳಿಂದ ಭ್ರಷ್ಟಾಚಾರ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ. ನಗರ ಶಾಸಕರು ಬಳ್ಳಾರಿಯಲ್ಲಿ ಭ್ರಷ್ಟಾಚಾರವನ್ನು ತೊಲಗಿಸುತ್ತೇನೆ ಎಂದಿದ್ದರು, ಆದರೆ ಶಾಸಕರಾಗಿ ಒಂದು ವರ್ಷಗಳ ಕಾಲ ಪೂರೈಸಿದರು ಅದನ್ನು ನಿಗ್ರಹಿಸಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ, ಫಾರಂ ನಂ 03 ಸೇರಿದಂತೆ ಪ್ರತಿಯೊಂದು ದಾಖಲೆಗಳಿಗೆ ಸಾವಿರಾರು ರೂಪಾಯಿಗಳ ಲಂಚ ಕೇಳುವ ಅಧಿಕಾರಿಗಳನ್ನು ಕೇಳಿದಲ್ಲಿ ನಾವು ಸಹ ಲಂಚಕೊಟ್ಟು ಬಂದಿದ್ದೇವೆ ಎಂದು ಯಾರ ಭಯವಿಲ್ಲದೆ ಸಾರ್ವಜನಿಕರ ಮುಖಕ್ಕೆ ಹೊಡೆದಂತೆ ಹೇಳುತ್ತಾರೆ. ಅಸಲಿಗೆ ಬಳ್ಳಾರಿಗೆ ಬರುವ ಅಧಿಕಾರಿಗಳು ಇಲ್ಲಿಂದ ವರ್ಗಾವಾಗಿ ಹೋಗಲು ಇಷ್ಟಪಡುವುದಿಲ್ಲ, ಇಲ್ಲೆ ವರ್ಷಾನುಗಟ್ಟಲೆ ಗೂಟಹೊಡೆದುಕೊಂಡು ಕೂರುತ್ತಾರೆ. ಇದಕ್ಕೆಲ್ಲಾ ಕಾರಣ ಬಳ್ಳಾರಿಯಲ್ಲಿನ ಹಚ್ಚ ಹಸುರಿನ ಹುಲ್ಲುಗಾವಲೆ ಕಾರಣ ಎಂಬುದು ನಗ್ನ ಸತ್ಯ.
ಇದರಿಂದಾಗಿ ಬಳ್ಳಾರಿಯ ಕೆಲ ಇಲಾಖೆಗಳ ಮೇಲೆ ಪದೇ ಪದೇ ಲೋಕಾ ಅಧಿಕಾರಿಗಳು ದಾಳಿ ಮಾಡುತ್ತಲೆ ಇದ್ದಾರೆ. ಆದರೂ ಭ್ರಷ್ಟಾಚರಾವನ್ನು ನಿರ್ಮೂಲನೆ ಮಾಡುವುದರಿಲಿ ಹತೋಟಿಗೆ ತರಲು ಸಹ ಸಾಧ್ಯವಾಗಿಲ್ಲ, ಇದರಿಂದ ನಾವು ಪ್ರತಿ ದಿನವೂ ನಮ್ಮ ಜೇಬಿಗೆ ಕತ್ತಿ ಹಾಕಿಸಿಕೊಳ್ಳಬೇಕಿದೆ ಎಂಬುದು ನಗರದ ನಾಗರೀಕರ ಅಳಲು.