ಬಳ್ಳಾರಿ,ಜು.10 : ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಸರಕಾರ ಜಿಪುಣತನ ತೋರಿಸುತ್ತಿದೆ. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಎಂಬ ಗಾದೆ ಮಾತಿಗೆ ಅನ್ವರ್ಥ ಎಂಬಂತೆ ಸರಕಾರ ನಡೆದುಕೊಳ್ಳುತ್ತಿದೆ. ತರಕಾರಿ ಬೆಲೆ ಗಗನಕ್ಕೇರಿದ್ದರೂ ಸರಕಾರ ಹಿಂದಿನ ಬಿಡಿಗಾಸನ್ನೇ ನೀಡಿ ಚೌಕಾಸಿ ಮಾಡುತ್ತಿದೆ. ಇದರಿಂದ ಮಕ್ಕಳಿಗೆ ಪೌಷ್ಟಿಕ ಊಟ ನೀಡುವುದು ಶಾಲಾ ಶಿಕ್ಷಕರಿಗೆ ಸವಾಲಾಗಿದೆ.
ತರಕಾರಿ ಬೆಲೆ ಗಗನಕ್ಕೇರಿದೆ. ಆದರೆ, ತರಕಾರಿ, ಮಸಾಲೆ ಪದಾರ್ಥಗಳು ಮತ್ತು ಮೊಟ್ಟೆ ಖರೀದಿಗೆ 1 ರಿಂದ 5 ನೇ ತರಗತಿಗೆ ಪ್ರತಿ ಮಕ್ಕಳಿಗೆ ತಲಾ 1.93 ರೂ ಹಾಗೂ 6 ರಿಂದ 10ನೇ ತರಗತಿ ಮಕ್ಕಳಿಗೆ 2.80 ರೂ ಮಾತ್ರ ಹಣ ನೀಡಲಾಗುತ್ತಿದೆ. ಈ ಹಣದಲ್ಲಿ ತರಕಾರಿ, ಉಪ್ಪು, ಸಾಂಬಾರು ಪದಾರ್ಥಗಳನ್ನು ಮಾಡಬೇಕು. ಒಂದು ಮೊಟ್ಟೆಗೆ ಸರಿಸುಮಾರು 7 ರೂ. ವೆಚ್ಚವಾಗುತ್ತಿದೆ. ಮಕ್ಕಳಿಗೆ ಒಳ್ಳೆಯ ತರಕಾರಿ ಸಾಂಬಾರು ಸಹಿತ ಪೌಷ್ಟಿಕ ಊಟ ನೀಡಿ ಎನ್ನುವ ಸರಕಾರಕ್ಕೆ ಮಾರುಕಟ್ಟೆಯಲ್ಲಿ ದರ ಏರಿಕೆಗೆ ಅನುಗುಣವಾಗಿ ಬಿಸಿಯೂಟದ ಬಾಬ್ತಿನಲ್ಲೂ ಹೆಚ್ಚಳ ಮಾಡಬೇಕೆಂಬ ಭಾವನೆ ಇನ್ನೂ ಮೂಡಿಲ್ಲ. 51,23,544 ಬಿಸಿಯೂಟ ಫಲಾನುಭವಿ ಮಕ್ಕಳು ರಾಜ್ಯದಲ್ಲಿದ್ದಾರೆ.
ಮೊಟ್ಟೆ ಖರೀದಿ :
ಬದಲಾಗುತ್ತಿರುವ ಮಾರುಕಟ್ಟೆ ದರದಲ್ಲಿ ಮೊಟ್ಟೆ ಖರೀದಿ, ಸುಲಿಯುವುದು, ಗ್ಯಾಸ್ ಸೇರಿ 7 ರೂ. ವೆಚ್ಚವಾಗುತ್ತಿದೆ. ಆದರೆ, ಸರಕಾರ ಒಂದು ಮೊಟ್ಟೆ ಖರೀದಿಗೆ 5 ರೂ. ಮಾತ್ರ ನೀಡುತ್ತಿದೆ. ಇದರಿಂದ ಹೆಚ್ಚುವರಿ ಹಣವನ್ನು ಶಿಕ್ಷಕರೇ ಕೈಯಿಂದ ಭರಿಸುವ ಸ್ಥಿತಿ ಇದೆ.
ತರಕಾರಿ ದರ :
ಈರುಳ್ಳಿ ಕೆ.ಜಿಗೆ 40 ರೂ.
ಬೀನ್ಸ್ 80
ಹಾಗಲಕಾಯಿ 60
ಬದನೆಕಾಯಿ 80
ಸೋರೆಕಾಯಿ 55
ಮೂಲಂಗಿ 60
ನವಿಲುಕೋಸು 40
ಬೆಂಡೆಕಾಯಿ 80
ಶಾಲಾ ಮಕ್ಕಳ ಬಿಸಿಯೂಟದ ತರಕಾರಿ, ಸಾಂಬಾರು ಪದಾರ್ಥಗಳಿಗೆ ನೀಡುತ್ತಿರುವ ಹಣ ಸಾಕಾಗುತ್ತಿಲ್ಲ. ಮೊಟ್ಟೆಗೆ ಹಣ ಕೂಡ 6 ರೂ ಸಾಲದು. ಈ ಬಗ್ಗೆ ಇಲಾಖೆ ಗಮನಕ್ಕೆ ತರಲಾಗಿದೆ ಎಂದು ಕೆ.ನಾಗೇಶ್ ರಾಜ್ಯಾಧ್ಯಕ್ಷ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವರು ಹೇಳಿದ್ದಾರೆ.