ಬೆಂಗಳೂರು: ನೈಸ್ ರಸ್ತೆಯಲ್ಲಿ ಸಂಭವಿಸಿದ 2 ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಗೋವಾ ಪ್ರವಾಸಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ನೈಸ್ ರಸ್ತೆಯಲ್ಲಿ ಭೀಕರವಾಗಿ ಕಾರು ಅಪಘಾತಕ್ಕೀಡಾಗಿ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗ್ರಾಮಪಂಚಾಯಿತಿ ಸದಸ್ಯ ಸೇರಿ ಮೂವರು ಸಾವನ್ನಪ್ಪಿದ್ದಾರೆ.
ಮೃತರನ್ನು ಖಾಸಗಿ ಸಾರಿಗೆ ಉದ್ಯಮಿ ನಂಜೇಗೌಡ (45) ಕನಕಪುರದ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಕಾರು ಚಾಲಕ ವಿನೋದ್ (36), ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯ ಎಚ್.ವಿ.ಕುಮಾರ್ (41) ಎಂದು ಗುರ್ತಿಸಲಾಗಿದೆ.
ಈ ಘಟನೆಯಲ್ಲಿ ಮತ್ತೊಂದು ಕಾರಿನಲ್ಲಿದ್ದ ಶಿವರಾಮಕೃಷ್ಣ ಹಾಗೂ ಪ್ರಸನ್ನ ಗಾಯಗೊಂಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ.
ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ವಿನೋದ್, ಆತನ ಸ್ನೇಹಿತರು ತೆರಳುತ್ತಿದ್ದರು. ಈ ವೇಳೆ ನೈಸ್ ರಸ್ತೆಯ ಸೋಪುರ ಸರ್ಕಲ್ ಬಳಿ ಕಾರಿನ ಚಾಲನೆ ಮೇಲೆ ನಿಯಂತ್ರಣ ಕಳೆದುಕೊಂಡ ವಿನೋದ್, ರಸ್ತೆ ವಿಭಜಕಕ್ಕೆ ಗುದ್ದಿ ಅಲ್ಲಿಂದ ಹಾರಿ ಮತ್ತೊಂದು ಬದಿಗೆ ನುಗ್ಗಿದ್ದಾರೆ. ಆಗ ಎದುರಿಗೆ ಬಂದ ಕಾರಿಗೆ ತಮ್ಮ ಕಾರನ್ನು ಗುದ್ದಿಸಿದ್ದಾರೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಗೆ ಅತಿವೇಗದ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ.