ಬಳ್ಳಾರಿ ಆಗಸ್ಟ್ 1: ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಮಾದಿಗ ಜನಾಂಗಕ್ಕೆ ಒಳ ಮೀಸಲಾತಿ ಕಲ್ಪಿಸುವುದರಿಂದ ಸಂವಿಧಾನ ಉಲ್ಲಂಘನೆ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ ಇದು ಸ್ವಾಗತ ವಿಷಯ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಮಾಧ್ಯಮ ವಕ್ತಾರಾ ವೆಂಕಟೇಶ್ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.
ಇಂದು ಸರ್ವೋಚ್ಚ ನ್ಯಾಯಾಲಯ ದೆಹಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಒಳಮಿಸಲಾತಿಯ ಕುರಿತು ನ್ಯಾಯಮೂರ್ತಿ ಗಳಾದ ಚಂದ್ರಚೂಡ್ರನ್ನೊಳಗೊಂಡ ಏಳು ನ್ಯಾಯಮೂರ್ತಿಗಳ ಪೀಠ ಇಂದು ಐತಿಹಾಸಿಕ ತೀರ್ಪು ನೀಡಿದೆ.
ಪರಿಶಿಷ್ಟ ಜಾತಿಯಲ್ಲಿರುವ ಹಲವು ಜಾತಿಗಳು ಇದುವರೆಗೆ ಸಂವಿಧಾನದ ಅನ್ವಯ ಮೀಸಲಾತಿಯಲ್ಲಿ ಹೆಚ್ಚಿನ ಅನುಕೂಲ ಪಡೆದುಕೊಂಡಿಲ್ಲ. ಇದೀಗ ಇದಕ್ಕೆ ಅವಕಾಶ ಕೊಡುವ ರೀತಿಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ.
ಒಂದು ವೇಳೆ ಪರಿಶಿಷ್ಟರಲ್ಲಿ ಒಳ ಮೀಸಲಾತಿ ನೀಡಿದರೆ ಅದು ಯಾವುದೇ ರೀತಿಯ ಉಲ್ಲಂಘನೆ ಆಗುವುದಿಲ್ಲ ಎಂದು ನಾಯಪೀಠ ಅಭಿಪ್ರಾಯಪಟ್ಟಿದೆ. ಆರ್ಟಿಕಲ್ 14 ಅಥವಾ 341(1), ಆರ್ಟಿಕಲ್ 15ರ ಉಲ್ಲಂಘನೆ ಮಾಡಿದಂತೆ ಆಗುವುದಿಲ್ಲ ಎಂಬ ತೀರ್ಪನ್ನು ನ್ಯಾಯಮೂರ್ತಿಗಳು ನೀಡಿದ್ದಾರೆ.
ಇಡೀ ದೇಶದಲ್ಲಿ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತ ಸುಪ್ರೀಂ ಕೋರ್ಟ್ ಅದರಲ್ಲೂ ವಿಶೇಷವಾಗಿ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಮತ್ತೊಂದು ಮಹತ್ತರ ತೀರ್ಪು ನೀಡಿ ಸಂವಿಧಾನ ಎತ್ತಿಹಿಡಿದ್ದಾರೆ.
ಸಂವಿಧಾನ ಇರುವುದೇ ಎಲ್ಲರಿಗೂ ಸಮಾನವಾಗಿ ಬದುಕುವ ಅವಕಾಶ ಸಿಗಬೇಕು. ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆ ಆಗಬೇಕು ಎಂಬ ಉದ್ದೇಶವನ್ನು ಸಾಕಾರ ಮಾಡಲು. ಅಂತಹ ಕಾರ್ಯಕ್ಕೆ ಮೀಸಲಾತಿ ಬಹಳ ಸಹಕಾರಿ ಆಗಲಿದೆ ಎಂದು ವೆಂಕಟೇಶ್ ಹೆಗಡೆ ಹೇಳಿದರು.
ಒಳ ಮೀಸಲಾತಿ ನೀಡುವುದರ ಹಿಂದಿನ ಉದ್ದೇಶ ಯಾರಿಗೋ ಅನ್ಯಾಯ ಮಾಡುವುದಲ್ಲ. ಬದಲಿಗೆ ದಮನಿತರ ಮತ್ತು ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಸದುದ್ದೇಶ ಆಗಿರುತ್ತದೆ. ಇಂತಹ ಉದ್ದೇಶಕ್ಕೆ ಯಾವುದೇ ಅಡೆ ತಡೆ ಸಂವಿಧಾನದಿಂದ ಇರಲು ಸಾಧ್ಯವಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ ಎಂದು ವೆಂಕಟೇಶ್ ಹೆಗಡೆ ತಿಳಿಸಿದರು.