ಬಳ್ಳಾರಿ,ಆ.01:ತಂತ್ರಜ್ಞಾನದ ಕೊರತೆಯ ಕಾಲದಲ್ಲಿ ಕರ್ನಾಟಕದ ಕಲೆ ಸಂಸ್ಕೃತಿಯಲ್ಲಿ ನಮ್ಮ ಹಿರಿಯರು ಮಹಾನ್ ಸಾಧನೆಗೈದು ತಮ್ಮ ಮುಂದಿನ ಪೀಳಿಗೆಗೆ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಅವರೇನು ತಮ್ಮ ಹೆಸರು ಅಜರಾಮರವಾಗಿ ಉಳಿಯಲೆಂದು ಉದ್ದೇಶ ಇಟ್ಟುಕೊಂಡು ಕಲಾ ಸೇವೆ ಮಾಡಿದವರಲ್ಲ. ಅಂಥವರಲ್ಲಿ ಬಳ್ಳಾರಿಯ ರಾಘವ ಅವರ ಹೆಸರು ಕಲಾ ಸೇವೆಯಲ್ಲಿ ನಿರಂತರ ಸತ್ಯ. ಅವರ ಸವಿ ನೆನಪಿಗಾಗಿ ರಾಘವ ಜಯಂತಿಯನ್ನು ಪ್ರತೀ ವರ್ಷ ವಿಶೇಷ ರೀತಿಯಿಂದ ಆಚರಿಸುವ ಉತ್ತಮ ಪರಂಪರೆ ಮುಂದುವರೆಯುತ್ತ ಬಂದಿದೆ.
ಬಳ್ಳಾರಿ ರಾಘವ ಜಯಂತಿ ಒಂದು ಸ್ಮರಣೋತ್ಸವ, ಕನ್ನಡ ನಾಟಕ ಮತ್ತು ಸಿನಿಮಾ ಕ್ಷೇತ್ರದ ಮಹಾನ್ ಕಲಾವಿದರಾದ ಬಳ್ಳಾರಿ ರಾಘವರನ್ನು ಇಂದಿನ ಪೀಳಿಗೆಗೆ ಪಠ್ಯಕ್ರಮದಂತೆ ಅಭ್ಯಸಿಸಲು ಮತ್ತು ಸ್ಮರಿಸಲು ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಇವರ ಜಯಂತಿಯಂದು, ರಾಘವರ ಕಲೆ, ಅಭಿನಯ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಅಮೂಲ್ಯ ಕೊಡುಗೆಗಳನ್ನು ಸ್ಮರಿಸುತ್ತಾರೆ.
ಆಗಷ್ಟ 2ನೇಯ 1880ರಲ್ಲಿ ಜನಿಸಿದ ರಾಘವರು,ನಾಟಕ ಮತ್ತು ಸಿನಿಮಾರಂಗದಲ್ಲಿ ನೈಜವಾದ ಪಾತ್ರಗಳನ್ನು ತೋರಿಸಲು ಹೆಸರುವಾಸಿಯಾಗಿದ್ದರು. ಅವರ ಕಲಾತ್ಮಕ ಸೃಜನಶೀಲತೆ ಮತ್ತು ನಾಟಕ ಪ್ರಪಂಚದ ನಾವೀನ್ಯತೆ ಕನ್ನಡಿಗರಿಗೆ ಮಾತ್ರವಲ್ಲ, ಇತರ ಎಲ್ಲಾ ಭಾಷಾ ಕಲಾಭಿಮಾನಿಗಳಿಗೆ ಒಂದು ಪ್ರೇರಣೆ. ಈ ಜಯಂತಿ ಸಂದರ್ಭದಲ್ಲಿ, ರಾಘವರ ನಾಟಕಗಳು, ಭಾಷಣಗಳು, ಮತ್ತು ಅವರ ಜೀವನದ ವೈಶಿಷ್ಟ್ಯಗಳನ್ನು ವಿಶ್ಲೇಷಿಸಿ, ಸ್ಮರಿಸುತ್ತಾರೆ.
ತಾಡಿಪತ್ರಿ ರಾಘವಾಚಾರ್ಯುಲು, ಬಳ್ಳಾರಿ ರಾಘವ ಎಂದೇ ಹೆಸರುವಾಸಿ. ತಮ್ಮ ಕೃತಿಗಳಿಗಾಗಿ ಮುಖ್ಯವಾಗಿ ಕನ್ನಡ, ತೆಲುಗು ರಂಗಭೂಮಿ ಮತ್ತು ಸಿನೆಮಾದಲ್ಲಿ ಪ್ರಸಿದ್ಧರಾಗಿದ್ದರು. ಅವರ ಮಾವ ಧರ್ಮವರಂ ರಾಮಕೃಷ್ಣಮಾಚಾರ್ಯುಲು ತೆಲುಗು ರಂಗಭೂಮಿಯ ಶ್ರೇಷ್ಠ ರಾಗಿದ್ದರು ಅವರು ರಾಘವರನ್ನು ರಂಗಭೂಮಿಗೆ ಪರಿಚಯಿಸಿದರು. ರಾಘವ ಬಳ್ಳಾರಿಯ ಇನ್ನೊಬ್ಬ ನಾಟಕಕಾರ ಕೊಲಚಾಲಂ ಶ್ರೀನಿವಾಸ ರಾವ್ ಅವರೊಂದಿಗೆ ಸಹಭಾಗಿಯಾಗಿದ್ದರು. ರಾಘವರ ಶಿಷ್ಯರಾದ ಸರೋಜಿನಿ ಕೊಪ್ಪರಪು, ಪದ್ಮಾವತಿ ಕೊಮ್ಮುರಿ, ಅಣ್ಣಪೂರ್ಣ ಕಾಕಿನಾಡ ಸೇರಿದಂತೆ ಮಹಿಳಾ ಕಲಾವಿದರು , ವಾಸುದೇವರಾವ್ ಕೆ ಎಸ್, ಅಪ್ಪಾರಾವ್ ಬಸವರಾಜು, ಮತ್ತು ಬಂಡಾ ಕನಕಲಿಂಗೇಶ್ವರ ರಾವ್ ಸೇರಿ ಪುರುಷ ಅನೇಕ ಕಲಾವಿದರು ಕಲಾನುಭವ ಪಡೆದವರು.
ರಾಘವರು ಬಳ್ಳಾರಿ ಹೈಸ್ಕೂಲ್ ಮತ್ತು ಕ್ರಿಶ್ಚಿಯನ್ ಕಾಲೇಜು, ಮದ್ರಾಸಲ್ಲಿ ಅಧ್ಯಯನ ಮಾಡಿದರು. ನಂತರ 1905ರಲ್ಲಿ ಮದ್ರಾಸ್ ಕಾನೂನು ಕಾಲೇಜಿನಿಂದ ಪದವಿ ಪಡೆದ ನಂತರ ಕಾನೂನು ವೃತ್ತಿಯನ್ನು ಆರಂಭಿಸಿದರು. 12ನೇ ವಯಸ್ಸಿನಲ್ಲೇ, ಬಳ್ಳಾರಿಯಲ್ಲಿ ಶೇಕ್ಸ್ಪಿಯರ್ ಕ್ಲಬ್ ಸ್ಥಾಪಿಸಿ, ಶೇಕ್ಸ್ಪಿಯರ್ ನಾಟಕಗಳಲ್ಲಿ ಅಭಿನಯಿಸಿದರು.ರಾಘವ ಬೆಂಗಳೂರಿನ ಶ್ರೀನಿವಾಸರಾವ್ ಕೊಲಚಾಲಂ ಅವರ “ಸುಮನೋಹರ” ತಂಡದಲ್ಲಿ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. 1909ರಲ್ಲಿ ಅವರು ಬೆಂಗಳೂರು ಅಮೆಚೂರ್ ಡ್ರಾಮಟಿಕ್ ಅಸೋಸಿಯೇಶನ್ ಅನ್ನು ಸ್ಥಾಪಿಸಿದರು.
ಹರಿಶ್ಚಂದ್ರ, ಪಾದುಕಾ ಪಟ್ಟಾಭಿಷೇಕಮು, ಸಾವಿತ್ರಿ, ಬೃಹನ್ನಳ, ರಾಮರಾಜು ಚರಿತ್ರ, ರಾಮದಾಸು, ತಪ್ಪೆವರಿದಿ, ಸರಿಪಡನಿ ಸಂಗತುలు ಮುಂತಾದವು ಅವರ ಪ್ರಖ್ಯಾತ ನಾಟಕಗಳು. ಅವರು ಶ್ರೀಲಂಕಾ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್ಲ್ಯಾಂಡ್ ಸೇರಿದಂತೆ ಹಲವು ದೇಶಗಳಿಗೆ ಭೇಟಿ ನೀಡಿ,ಭಾರತೀಯ ನಾಟಕ ಕಲೆ ಕುರಿತು ವಿಚಾರಸಂವಾದ ಮತ್ತು ಉಪನ್ಯಾಸಗಳನ್ನು ನೀಡಿದರು. ಅವರು ನಾಟಕದಲ್ಲಿ ನೈಜ ಶೈಲಿಯನ್ನು ಪ್ರೋತ್ಸಾಹಿಸಿ ಅಭಿವೃದ್ಧಿಪಡಿಸಿದರು. ನಾಟಕದಲ್ಲಿ ಮಹಿಳಾ ಪಾತ್ರಗಳನ್ನು ಸದಾ ಮಹಿಳೆಯರೇ ನಿರ್ವಹಿಸಬೇಕು ಎಂಬುದರಲ್ಲಿ ಅವರು ಕಟ್ಟುನಿಟ್ಟಾಗಿದ್ದರು. 1927ರಲ್ಲಿ ಇಂಗ್ಲೆಂಡ್ಗೆ ತೆರಳಿ ಲಾರೆನ್ಸ್ ಒಲಿವಿಯರ್ ಮತ್ತು ಚಾರ್ಲಸ್ ಲಾಘ್ಟನ್ ಜೊತೆ ಇಂಗ್ಲಿಷ್ ನಾಟಕಗಳಲ್ಲಿ ಭಾಗವಹಿಸಿದರು. 1930ರಲ್ಲಿ ಮದ್ರಾಸಿನಲ್ಲಿ ರಾಜಮನ್ನಾರ್ ಅವರ ತಪ್ಪೆವರಿದಿ ಪ್ರದರ್ಶನವು ತೆಲುಗು ರಂಗಭೂಮಿಯಲ್ಲಿ ಹೊಸ ಯುಗವನ್ನು ಪ್ರಾರಂಭಿಸಿದ ಮಹತ್ವದ ಘಟನೆಯಾಗಿ ವಿಮರ್ಶಾತ್ಮಕ ಸ್ವಾಗತವನ್ನು ಪಡೆಯಿತು.
1936 ರಲ್ಲಿ,ರಾಘವ ಅವರು ಎಚ್ಎಂ ರೆಡ್ಡಿ ಅವರ ದ್ರೌಪದಿ ಮಾನಸಂರಕ್ಷಣಂ ಚಿತ್ರದಲ್ಲಿ ದುರ್ಯೋಧನನ ಪಾತ್ರವನ್ನು ನಿರ್ವಹಿಸಿದರು . ನಂತರ ಅವರು ರೈತು ಬಿಡ್ಡ (1939) ಮತ್ತು ಚಂಡಿಕಾ (1940), ನಲ್ಲಿ ನಟಿಸಿ ಮೆಚ್ಚುಗೆಯನ್ನು ಗಳಿಸಿದರು.
ರಾಘವ 16 ಏಪ್ರಿಲ್ 1946 ರಂದು ಅಸ್ತಂಗತರಾಗಿ ಕಲಾ ಪ್ರಪಂಚದ ನೆನಪಲ್ಲಿ ಚಿರಸ್ಮರಣೀಯರಾದರು. ಈ ಕಲಾವಿದರ ಸ್ಮರಣೆಗಾಗಿ ಬಳ್ಳಾರಿಯಲ್ಲಿ ರಾಘವ ಪುರಸ್ಕಾರಂ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಕೊಡುಗೆ ನೀಡಿದ ಪ್ರತಿಭಾವಂತ ಕಲಾವಿದರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 1981 ರಲ್ಲಿ, ಅವರ ಸವಿ ನೆನಪಿಗಾಗಿ ಅಂಚೆ ಅವರ ಭಾವಚಿತ್ರವಿರುವ ಚೀಟಿಯನ್ನೂ ಬಿಡುಗಡೆ ಮಾಡಲಾಯಿತು.
ಇಂತಹ ಮಹಾನ್ ವ್ಯಕ್ತಿಯ ಕಲಾ ಸೇವೆಯನ್ನು ಅಭ್ಯಸಿಸಿ ತನ್ಮೂಲಕ ರಂಗಭೂಮಿ / ಚಿತ್ರ ರಂಗವನ್ನು ಇನ್ನಷ್ಟು ಶ್ರೀಮಂತಗೊಳಿಸಿದರೆ, ಅದೇ ಅವರಿಗೆ ಕೊಡುವ ಗೌರವವಾದೀತು.
ಇಂದು 144ನೇ ಬಳ್ಳಾರಿ ರಾಘವರವರ ಜಯಂತಿ :
ಇಂದು 144ನೇ ಬಳ್ಳಾರಿ ರಾಘವರವರ ಜಯಂತಿ ಮತ್ತುರಾಘವ ಪ್ರಶಸ್ತಿ ಪ್ರದಾನ ನಗರದ ಡಾ. ರಾಜಕುಮಾರ್ ರಸ್ತೆಯ ಇಂದಿರಾ ಸರ್ಕಲ್ ಹತ್ತಿರ ಇರುವ ರಾಘವ ಕಲಾಮಂದಿರದಲ್ಲಿ ಬಳ್ಳಾರಿ ರಾಘವ ಅವರ 144ನೇ ಜಯಂತಿಯನ್ನು ನಡೆಸಲಾಗುವುದು ಮತ್ತು ಇದೇ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಅವಿರತ ಸೇವೆ ಸಲ್ಲಿಸಿರುವ ರಂಗಭೂಮಿ ಕಲಾವಿದರಿಗೆ ಬಳ್ಳಾರಿ ರಾಘವ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ರಾಘವ ಕಲಾ ಮಂದಿರದ ರಮಣಪ್ಪ ಭಜಂತ್ರಿ ತಿಳಿಸಿದ್ದಾರೆ.ಸಂಜೆ 5 ಗಂಟೆಗೆ ರಾಘವ ಕಲಾ ಮಂದಿರದಿಂದ ಗಡಿಗಿ ಚನ್ನಪ್ಪ ವೃತ್ತದಲ್ಲಿರುವ ರಾಘವ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಗುವುದು ನಂತರ 6 ಗಂಟೆಗೆ ರಾಘವ ಕಲಾ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ ಜಿ ಶಾಂತಿ ನಡೆಸಿಕೊಡುವರು.
ಮುಖ್ಯ ಅತಿಥಿಗಳಾಗಿ ರುದ್ರೇಶ್ಎಸ್ ಎನ್ ಕುಲಸಚಿವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಇವರು ಭಾಗವಹಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ಕೆ ಚೆನ್ನಪ್ಪ, ರಾಘವ ಮೆಮೋರಿಯಲ್ ಅಸೋಸಿಯೇಷನ್ ಬಳ್ಳಾರಿ ಇವರುಗಳು ವಹಿಸಿಕೊಳ್ಳಲಿದ್ದಾರೆ.
ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಕಾರಂತ, ಬೆಂಗಳೂರು
ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ತದನಂತರ ಕೊರಂಟೈನ್ ರವರು ರಚಿಸಿ ನಿರ್ದೇಶಿಸಿರುವ ಮರಣ ಮೃದಂಗ ನಾಟಕವನ್ನು ಪ್ರಸ್ತುತಪಡಿಸಲಾಗುವುದು.ಮರುದಿನ ಶನಿವಾರ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನಡೆಸಲಾಗುವುದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಘವ ಮೆಮೋರಿಯಲ್ ಅಧ್ಯಕ್ಷರಾದ ಕೆ ಕೋಟೇಶ್ವರ ರಾವ್ ವಹಿಸಿಕೊಳ್ಳಲಿದ್ದಾರೆ .ಜಸ್ಟೀಸ್ ಡಾಕ್ಟರ್ ಮಂಜುಳ ಚೆಲ್ಲೂರು ನಿವೃತ್ತ ಮುಖ್ಯ ನ್ಯಾಯಮೂರ್ತಿ ಗಳು, ಉಚ್ಚ ನ್ಯಾಯಾಲಯ, ಕೇರಳ, ಕಲ್ಕತ ಮತ್ತು ಮುಂಬಯಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ, ಗೌರವ ಅತಿಥಿಗಳಾಗಿ ವಾಡ್ರೇವು ಸುಂದರ್ ರಾವ್ ಅಂತರಾಷ್ಟ್ರೀಯ ನಟ, ತಣುಕು, ಪಶ್ಚಿಮ ಗೋದಾವರಿ ಜಿಲ್ಲೆ ಇವರುಗಳು ಆಗಮಿಸಿ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ
ಕೊನೇಟಿ ಸುಬ್ಬರಾಜು ತಿರುಪತಿ.ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ತದನಂತರಯಯಾತಿ ಪುತ್ರ ಏಕಪಾತ್ರ ಆಭಿನಯ ವಾಡ್ರೇವು ಸುಂದರ್ರಾವು ತಣುಕು,ಪಶ್ಚಿಮ ಗೋದಾವರಿ ಜಿಲ್ಲೆ ಅಮೃತ ಲಹರಿ ಥಿಯೇಟರ್ ಆರ್ಟ್ಸ್,ಗುಂಟೂರು ತಂಡದಿಂದ ನಾನ್ನಾ…ನೇನು ವಚ್ಚೆಸ್ತ ತೆಲುಗು ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಾಘವ ಮೆಮೋರಿಯಲ್ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.