ಬಳ್ಳಾರಿ, ಆಗಸ್ಟ್ 6: ತಾಲೂಕಿನ ರೂಪನ ಗುಡಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಸರ್ಕಾರ ಆರೋಗ್ಯ ಯೋಜನೆಗಳನ್ನು ಹಮ್ಮಿಕೊಂಡಿದೆ ಗ್ರಾಮೀಣ ಭಾಗದ ಜನರಿಗೆ ಉತ್ತಮವಾದ ಆರೋಗ್ಯವನ್ನು ಕಲ್ಪಿಸುವ ಉದ್ದೇಶದಿಂದ ಆರೋಗ್ಯವೇ ಮಹಾಭಾಗ್ಯ ಎಂಬ ಧೇಯ ವಾಕ್ಯದಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಆದರೆ ಗ್ರಾಮೀಣ ಭಾಗದ ಜನರಿಗೆ ಸಮರ್ಪಕವಾಗಿ ಆರೋಗ್ಯ ಸೇವೆ ಸಿಗುತ್ತಿಲ್ಲ ಎಂದೇ ಹೇಳಬಹುದು.
ತಾಲೂಕು ವ್ಯಾಪ್ತಿಯ ರೂಪನಗುಡಿ ಗ್ರಾಮದಲ್ಲಿ ಜಿಲ್ಲಾ ಖನಿಜ ವಿದ್ಯಾ ಅಡಿಯಲ್ಲಿ ಸುಮಾರು ರೂ. 52 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಗ್ರಾಮದ ಜನರಿಗೆ ಅಗತ್ಯ ಆರೋಗ್ಯ ಸೇವೆ ನೀಡುತ್ತಿಲ್ಲ ಎಂಬ ಆರೋಪ ಗ್ರಾಮದ ಜನರಿಂದ ಕೇಳಿ ಬರುತ್ತಿದೆ. ಬಳ್ಳಾರಿ ತಾಲೂಕಿನ ಪ್ರಮುಖ ಕೇಂದ್ರಗಳಲ್ಲೊಂದಾದ ರೂಪನಗುಡಿ ಆರೋಗ್ಯ ಕೇಂದ್ರ ಅನಂತಪುರ ಜಿಲ್ಲೆಯ ಗಡಿ ಭಾಗವಾಗಿರುವುದರಿಂದ ರಾಜ್ಯ ಸರಕಾರ ಮೂಲ ಉದ್ದೇಶದಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ. ಸುತ್ತಮುತ್ತಲಿನ ಜನರಿಗೆ ಆರೋಗ್ಯ ದಿನದ 24 ಗಂಟೆಯೂ ಸಾರ್ವಜನಿಕರಿಗೆ ಲಭ್ಯವಿರಬೇಕಾದ ವೈದ್ಯರು ಆರೋಗ್ಯ ಕೇಂದ್ರಕ್ಕೆ ಬಂದು ಹೋಗುತ್ತಿದ್ದು, ರೋಗಿಗಳು ವೈದ್ಯರಿಗಾಗಿ ಕಾಯಬೇಕಾಗಿದೆ. ಪ್ರಸ್ತುತ ಮಳೆಗಾಲದ ಜತೆಗೆ ಡೆಂಗೆ ರೋಗಹರಡುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ವಿವಿಧ ರೋಗಗಳಿಗೆ ಚಿಕಿತ್ಸೆ ಮತ್ತು ಔಷಧಿಗಾಗಿ ಪರದಾಡುವಂತಾಗಿದೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಆಸ್ಪತ್ರೆಯ ಸಿಬ್ಬಂದಿ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವ್ಯವಸ್ಥೆ ಮಾಡಿರುವ ಶೌಚಾಲಯಗಳಿಗೆ ಬೀಗ ಹಾಕಿರುವುದನ್ನು ನೋಡಿ… ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಜನರಿಗೆ ಯಾವ ರೀತಿಯ ಸೇವೆಗಳನ್ನು ಒದಗಿಸಲಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಆಸ್ಪತ್ರೆಯಲ್ಲಿ ವೃದ್ಧರಿಗೆ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಿಲ್ಲ, ಆಸ್ಪತ್ರೆಯ ಹೊರಗೆ ವೈದ್ಯರಿಗಾಗಿ ನಿಂತುಕೊಂಡೆ ಕಾಯಬೇಕಾದ ಅವಸ್ಥೆ ಇದೆ. ಅಧಿಕಾರಿಗಳು ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸಿ ಜನರಿಗೆ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ವಹಿಸಿ, ಅಗತ್ಯ ಔಷಧ ನೀಡಲು ಕ್ರಮಕೈಗೊಳ್ಳುತ್ತಿಲ್ಲ ಎಂದು ರೂಪನಗುಡಿ ಗ್ರಾಮದ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಆಸ್ಪತ್ರೆಯಲ್ಲಿ ವೈದ್ಯ ಅಧಿಕಾರಿಗಳು ವ್ಯರ್ಥವಾಗಿದ್ದಾರೆ. ಜಿಲ್ಲಾ ಮಟ್ಟದ ಆರೋಗ್ಯ ಅಧಿಕಾರಿಗಳು ಆರೋಗ್ಯ ಕೇಂದ್ರದ ಅನೈರ್ಮಲ್ಯವನ್ನು ಸ್ವಚ್ಛಗೊಳಿಸುವ ಮತ್ತು ಆಯುಷ್ಮಾನ್ ಭಾರತ್ ಆರೋಗ್ಯ ಕೇಂದ್ರದಲ್ಲಿ ಗ್ರಾಮದ ಜನರಿಗೆ ಅಗತ್ಯ ವೈದ್ಯಕೀಯ ಸೇವೆಗಳನ್ನು ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.