ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದು, ರಾಜ್ಯಪಾಲರು ವಿಚಾರಣೆಗೆ ಅನುಮತಿ ನೀಡಿದ್ದಾರೆ, ಸಿ.ಎಂ.ಸಿದ್ದರಾಮಯ್ಯ ಅವರು ಕೂಡಲೇ ನೈತಿಕ ಹೊಣೆ ಹೊತ್ತು ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಒತ್ತಾಯಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಹಗರಣದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎನ್ನುವುದು ಕಡತಗಳು ಹೇಳುತ್ತಿವೆ, ಕೂಡಲೇ ನೈತಿಕ ಹೊಣೆ ಹೊತ್ತು ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಇದರಲ್ಲಿ ನಮ್ಮದೇನೂ ತಪ್ಪಿಲ್ಲ ಎಂದು ಸಾಧಿಸುವದಾದರೆ ಕಾನೂನು ತನಿಖೆ ಎದುರಿಸಿ ಹೊರಬನ್ನಿ, ಅಲ್ಲಿವರೆಗೆ ಸಿ.ಎಂ.ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಒತ್ತಾಯಿಸಿದರು.
ಈ ಹಿಂದೆ ಇಂತಹ ಪ್ರಕರಣದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು, ಮಾಜಿ ಸಿ.ಎಂ.ಬೀ.ಎಸ್.ಯಡಿಯೂರಪ್ಪ ಅವರನ್ನು ರಾಜೀನಾಮೆಗೆ ಒತ್ತಾಯ ಮಾಡಿದ್ದು, ಇದನ್ನು ಮರೆತಿದ್ದಾರೆ, 4 ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿರುವ ಸಿದ್ದರಾಮಯ್ಯ ಅವರು, ನಾನು ಶುದ್ಧ ಎಂದು ತಮಗೆ ತಾವೇ ಆಫೀಡಿವಿಟ್ ಹಾಕಿಕೊಂಡು ಸಾಕಷ್ಟು ಸಂದರ್ಭಗಳಲ್ಲಿ ಲೋಕಾಯುಕ್ತ ಮುಂದಿದ್ದ 106 ಪ್ರಕರಣಗಳಲ್ಲಿ 65 ಕ್ಕೂ ಹೆಚ್ಚು ಹೆಚ್ಚು ಪ್ರಕರಣಗಳಲ್ಲಿ ಅವರೇ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ, ಚಳವಳಿ ರೂಪದಲ್ಲಿ ನಡೆಯುತ್ತಿದ್ದ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಸಲು ಕಾರಣರಾಗಿದ್ದರು ಎಂದು ವಾಗ್ದಾಳಿ ನಡೆಸಿದರು.
ಅರ್ಕಾವತಿ ಬಡಾವಣೆ ರೀಡೂ ಹಗರಣದಲ್ಲಿ ಜನರನ್ನು ಯಾಮಾರಿಸಿದ ರೀತಿ ಈ ಬಾರಿ ಯಾಮಾರಿಸಲು ಸಾಧ್ಯವಿಲ್ಲ, ಇದರಲ್ಲಿ ಎಲ್ಲ ದಾಖಲೆಗಳು ಸ್ಪಷ್ಟವಾಗಿ ಕಾಣುತ್ತಿವೆ. ನಡೆದಿರುವ ಎಲ್ಲ ನಡಾವಳಿಯನ್ನು ಗಮನಿಸಿದರೆ, ಮೇಲ್ನೋಟವಲ್ಲ, ದಾಖಲೆ ಸಮೇತ ಸಿದ್ದರಾಮಯ್ಯನವರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದು ಕಂಡುಬರುತ್ತಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಅನೇಕ ನ್ಯಾಯಾಲಯಗಳು ಅನೇಕ ನಿರ್ದೇಶನಗಳನ್ನು ಕೊಟ್ಟಿವೆ. ಸ್ವತಃ ಸಂವಿಧಾನದ ಮುಖ್ಯಸ್ಥರಾದ ಸಿದ್ದರಾಮಯ್ಯ ಅವರ ಮೇಲೆ ನೀಡಿದ ದೂರಿನ ತನಿಖೆ ಮಾಡದಿದ್ದಲ್ಲಿ, ಸಂವಿಧಾನದ ಆಶಯ, ಜನರಲ್ಲಿ ಸಂವಿಧಾನದ ಬಗೆಗಿನ ನಂಬಿಕೆ ಹೊರಟು ಹೋಗಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ರಾಮಲಿಂಗಪ್ಪ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮನ ಗೌಡ, ಕೆ. ಆರ್.ಮಲ್ಲೇಶ ಕುಮಾರ್, ರಘು ಇದ್ದರು.