ಬಳ್ಳಾರಿ: ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಐವನ್ ಡಿಸೋಜಾ, ಜಮೀರ್ ಅಹ್ಮದ್ ಹೇಳಿಕೆ ಖಂಡಿಸಿ ಹಾಗೂ ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಇಲ್ಲಿನ ಬಿಜೆಪಿ ಕಾರ್ಯಕರ್ತರು ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ರಾಯಲ್ ವೃತ್ತದ ಬಳಿ ಜಮಾಯಿಸಿದ ನೂರಾರು ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಡಿಸಿ ಅವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರು ಮಾತನಾಡಿ, ಮೂಡಾ ನಿವೇಶನ ಪ್ರಕರಣದಲ್ಲಿ ಸಿ.ಎಂ.ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು, ತನಿಖೆಗೆ ಒಳಪಡಿಸಿ ಎಂದು ದೂರು ಬಂದ ಹಿನ್ನೆಲೆ ಘನವೆತ್ತ ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿದ್ದಾರೆ, ಕೈ ನಾಯಕರು ರಾಜ್ಯಪಾಲರ ಕ್ರಮ ಖಂಡಿಸಿ ಅವರ ಬಗ್ಗೆ ಅವಹೇಳನಕಾರಿ ರೀತಿಯಲ್ಲಿ ಹೇಳಿಕೆ ನೀಡಿ ಅಪಮಾನ ವ್ಯಸಗಿದ್ದಾರೆ, ಇದು ಅತ್ಯಂತ ಖಂಡನೀಯ, ನಾನಾ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆಸಿದ ವಿವಿಧ ಸಚಿವರು, ಐವನ್ ಡಿಸೋಜಾ ಸೇರಿದಂತೆ ಅನೇಕ ಜನರು ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ, ಕೂಡಲೇ ಇವರೆಲ್ಲರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ, ಕೂಡಲೇ ನೈತಿಕ ಹೊಣೆ ಹಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು, ನಿರ್ಲಕ್ಷ್ಯ ಧೋರಣೆ ಮುಂದುವರೆಸಿದರೆ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಐವನ್ ಡಿಸೋಜಾ ಅವರು ತಮ್ಮ ಭಾಷಣದಲ್ಲಿ ಜನರಲ್ಲಿ ಭೀತಿ ಮೂಡಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ, ಘನವೆತ್ತ ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿ ಕಾನೂನು ಪ್ರಕಾರವೇ ಕ್ರಮಕ್ಕೆ ಮುಂದಾದರೆ, ಸಚಿವರು, ಕೈ ನಾಯಕರು ರಾಜ್ಯಪಾಲರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಂಗ್ಲಾ ದೇಶದ ಸ್ಥಿತಿ ನಿಮಗೂ ಬರಲಿದೆ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ ಐವನ್ ಡಿಸೋಜಾ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ಸಿ.ಎಂ.ಸಿದ್ದರಾಮಯ್ಯ ತಪ್ಪು ಮಾಡದಿದ್ದಾರೆ, ಕಾನೂನು ತನಿಖೆ ಎದುರಿಸಿ ಹೊರಬರಲಿ, ತಪ್ಪು ಮಾಡಿಲ್ಲ ಎಂದು ಸಾಬೀತುಪಡಿಸಲಿ ಎಂದು ಸವಾಲೆಸೆದರು. ಮಾಜಿ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ, ಕಾಂಗ್ರೆಸ್ ನವರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಹಾಳು ಮಾಡಲು ಮುಂದಾಗಿದ್ದಾರೆ, ಅವರಿಗೆ ಸಂವಿದಾನದ ಬಗ್ಗೆ ಗೌರವವಿಲ್ಲ, ಘನವೆತ್ತ ರಾಜ್ಯಪಾಲರು ಕಾನೂನು ಪ್ರಕಾರವೇ ತಮ್ಮ ಕೆಲಸವನ್ನು ಮಾಡಿದ್ದರು ಕೈ ನಾಯಕರು ಅವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ರಾಘವೇಂದ್ರ ಯಾದವ್, ಜಿಲ್ಲಾ ಕಾರ್ಯದರ್ಶಿ ಸಿದ್ದೇಶ್ ಉಪ್ಪಾರ್, ಯುವ ಘಟಕದ ಅಧ್ಯಕ್ಷ ಎಂ.ಎಸ್.ಸಿದ್ದಪ್ಪ, ರಾಘವೇಂದ್ರ, ಸುದರ್ಶನ ರೆಡ್ಡಿ, ಗಿರೀಶ್ ಪಾಟೀಲ್, ವಿಜಯ ಪ್ರತಾಪ್ ಸಿಂಹ, ನವೀನ್, ಪ್ರಕಾಶ್, ಗಣಪಾಲ ಐನಾತ್ ರೆಡ್ಡಿ, ಒoಪ್ರಕಾಶ್, ಎಚ್.ಹನುಮಂತಪ್ಪ, ಸಿರುಗುಪ್ಪ ಮಲ್ಲಿಕಾರ್ಜುನ್ ಗೌಡ, ಪಾಲಿಕೆ ಸದಸ್ಯರಾದ ಸುರೇಖಾ ಮಲ್ಲನಗೌಡ, ಇಬ್ರಾಹಿಂ ಬಾಬು, ಸೇರಿದಂತೆ ನೂರಾರು ಮುಖಂಡರು ಭಾಗವಹಿಸಿದ್ದರು.