ಬಳ್ಳಾರಿ, ಆಗಸ್ಟ್. 23: ನಗರದ ಮೀನಾಕ್ಷಿ ಸರ್ಕಲ್ ಹತ್ತಿರ ಇರುವ ಕೆ ಸಿ ರಸ್ತೆಯಲ್ಲಿ ನವನೀತ್ ವೈನ್ ಶಾಪ್ ಮುಂದೆ ಬಿದ್ದ ದೊಡ್ಡ ಗುಂಡಿಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ಬಹಳ ಅನಾನುಕೂಲವಾಗಿತ್ತು. ಅತ್ಯಂತ ಮುಖ್ಯವಾಗಿ ಬಸ್ ಮತ್ತು ಕಾರುಗಳು ಓಡಾಟಕ್ಕೆ ತುಂಬಾ ತೊಂದರೆಯಾಗಿತ್ತು. ಈ ಗುಂಡಿಯನ್ನು ಗಮನಿಸಿದ ಮೀನಾಕ್ಷಿ ವೃತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ಠಾಣೆ ಎ.ಎಸ್.ಐ ನವಾಬ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳಾದ ಕೊಳಗಲ್ಲು ಗೋವರ್ಧನ್ ಮತ್ತು ಜಿ ಏರ್ರಿಸ್ವಾಮಿ ಇವರುಗಳು ಟ್ರ್ಯಾಕ್ಟರ್ ನಲ್ಲಿ ಸಾಗಾಟ ಮಾಡುತ್ತಿದ್ದ ವೆಸ್ಟ್ ಮಣ್ಣನ್ನು ಗುಂಡಿಗೆ ಹಾಕಿ ಮುಚ್ಚಿ ಸಾರ್ವಜನಿಕರ ಹೋರಾಟಕ್ಕೆ ಅನುಕೂಲ ಮಾಡಿಕೊಟ್ಟರು.
ಕಳೆದ ಕೆಲವು ದಿನಗಳಿಂದ ಹಾಗೆ ಇದ್ದ ಈ ಗುಂಡಿಯನ್ನು ಮುಚ್ಚಲು ಮಹಾನಗರ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರು. ಅಲ್ಲದೆ ಇದೇ ರಸ್ತೆಯಲ್ಲಿ ಹಲವಾರು ಬಾರಿ ತಿರುಗಾಡುತ್ತಿದ್ದ, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಮುಖಂಡರುಗಳು ಈ ಗುಂಡಿಯನ್ನು ಕಂಡರೂ ಕಾಣದಂತೆ ತಮಗೇಕೆ ಈ ಉಸಾಬರಿ ಎಂದು ಹಾಗೆ ತಿರುಗಾಡುತ್ತಿದ್ದರು. ದ್ವಿಚಕ್ರ ವಾಹನ ಸವಾರರು ಆಟೋಗಳು ಕಾರುಗಳು ಮತ್ತು ಬಸ್ಸುಗಳು ಈ ಗುಂಡಿಯಲ್ಲಿ ಬೀಳುತ್ತಾ ಸರ್ಕಸ್ ಮಾಡುತ್ತಾ ತಿರುಗಾಡುತ್ತಿದ್ದನ್ನು ಕಂಡ ಸಂಚಾರಿ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ಮಣ್ಣು ಹಾಕಿ ಮುಚ್ಚಿ ಮುಚ್ಚಿ ಸಾರ್ವಜನಿಕರಿಗೆ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು. ಇವರ ಈ ಕಾರ್ಯವನ್ನು ಸಾರ್ವಜನಿಕರು ಮೆಚ್ಚಿ ಪಾಲಿಕೆ ಮಾಡಬೇಕಾದ ಜವಾಬ್ದಾರಿಯನ್ನು ಹೋಂ ಗಾರ್ಡುಗಳು ನಿರ್ವಹಿಸಿದ್ದಾರೆ ಎಂದು ಇವರ ಕಾರ್ಯವನ್ನು ಶ್ಲಾಘಿಸಿದರು.