ಬಳ್ಳಾರಿ, ಆ.26: ಹೈ-ಕರ್ನಾಟಕ ಭಾಗದ ಮೆಟ್ರಿಕ್ ನಂತರದ ವ್ಯಾಸಂಗಕ್ಕಾಗಿ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಆರ್ಥಿಕ ನೆರವು ನೀಡಲಾಗುವುದು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಪತ್ನಿ, ವೀರಶೈವ ಲಿಂಗಾಯತ ಸಮುದಾಯದ ಯುವ ನಾಯಕಿ ನಾರಾ ವೈಜಯಂತಿ ರೆಡ್ಡಿ ಹೇಳಿದ್ದಾರೆ.
ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಸಮಿತಿ ಚುನಾವಣೆಯಲ್ಲಿ ಭಾಗವಹಿಸಿ ಮತದಾನ ನಡೆಸಿದ ತರುವಾಯ ಸೋಮವಾರ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.
ಭಾನುವಾರ ನಡೆದ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ನಿರ್ದೇಶಕರ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಿದ್ದೇನೆ, ಯಾರೇ ಗೆದ್ದರೂ ಕೂಡ ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಿ ಎಂದು ಹಾರೈಸುವೆ ಎಂದು ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ನಾನು, ನನ್ನ ಸಮಾನ ಮನಸ್ಕರೊಂದಿಗೆ ಚರ್ಚಿಸಿ, ಒಂದು ಕಾರ್ಯಕ್ರಮ ರೂಪಿಸಿದ್ದೇವೆ ಎಂದು ಹೇಳಿರುವ ನಾರಾ ವೈಜಯಂತಿ ರೆಡ್ಡಿ ಅವರು, ಬಡತನದ ಕಾರಣಕ್ಕೆ ಯಾರಿಗೆ ಮೆಟ್ರಿಕ್ ನಂತರದ ಶಿಕ್ಷಣ ಪಡೆಯಲು ಸಾಧ್ಯವಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮಕ್ಕೆ “ಬಸವಣ್ಣ ಅಕ್ಷರ ದಾಸೋಹ” ಎಂಬ ಹೆಸರಿಡಲು ತೀರ್ಮಾನಿಸಿದ್ದೇವೆ. ಯೋಜನೆಯ ಪ್ರಕಾರ ಎಲ್ಲವೂ ನಡೆದಲ್ಲಿ ಇನ್ನು ಎರಡು ತಿಂಗಳ ನಂತರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ಹಾಗೂ ಸಮುದಾಯದ ಮಠಗಳು ಕಳೆದ ನೂರಾರು ವರ್ಷಗಳಿಂದ ತ್ರಿವಿಧ ದಾಸೋಹದಲ್ಲಿ ತೊಡಗಿಕೊಂಡಿದ್ದು, ನಮ್ಮ ಹಿರಿಯರ ಪರಂಪರೆಯನ್ನು ಮುಂದುವರೆಸುವ ಮೂಲಕ ಸಮಾಜದ ಅಭಿವೃದ್ಧಿಗೆ ಅಳಿಲು ಸೇವೆ ಸಲ್ಲಿಸಬೇಕೆಂಬ ಸಂಕಲ್ಪ ನನ್ನದು ಎಂದು ಅವರು ತಿಳಿಸಿದ್ದಾರೆ.