ಬಳ್ಳಾರಿ, ಆಗಸ್ಟ್. 27: ಜಿಲ್ಲೆಯ ಕುರುಗೋಡಿನಲ್ಲಿ 291 ಎಕರೆ ಕೃಷಿ ಜಮೀನನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಇತರರು ಸುಮಾರು ಮೂರು ತಲೆಮಾರುಗಳಿಂದ ಸಾಗುವಳಿ ಮಾಡುತ್ತಾ ಜೀವನ ಮಾಡುತ್ತಿರುವ 178 ಕುಟುಂಬಗಳಿಗೆ ಹಕ್ಕು ಪತ್ರವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ಯು. ಬಸವರಾಜ್ ಒತ್ತಾಯಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, 178 ಜನ ಸಾಗುವಳಿದಾರ ರೈತರು ಫಾರಂ ನಂಬರ್ 57 ನ್ನ ಸಲ್ಲಿಸಿ ಪತ್ರವನ್ನು ನೀಡಲು ವಿನಂತಿಸಲಾಗಿತ್ತು, ಆದರೆ ಸರ್ಕಾರವು ರೈತರ ಮನವಿಯನ್ನು ತಿರಸ್ಕರಿಸಿ ಇದು ಮಲ್ಲಪ್ಪನಕೆರೆ ಜಾಗ ಈ ಜಮೀನನ್ನು ಸಾಗುವಳಿ ಮಾಡಲು ಹಕ್ಕುಪತ್ರವನ್ನು ನೀಡಲು ಸಾಧ್ಯವಿಲ್ಲ ಎಂದು ತಿರಸ್ಕರಿಸಿರುತ್ತದೆ ಇದು ಭೂ ಮಾಲೀಕರ ಮತ್ತು ರಾಜಕಾರಣಿಗಳ ಕಿತೂರಿ ಆಗಿರುತ್ತದೆ.
ಈಗಾಗಲೇ ಕಂಪ್ಲಿ ರಸ್ತೆಯಲ್ಲಿ ಈಗಾಗಲೇ ಕೆರೆ ಜಾಗವಿದ್ದು ಆ ಕೆರೆಯನ್ನು ಕುಡಿಯುವ ನೀರಿಗಾಗಿ ಪರಿವರ್ತಿಸಿ ಬಳಸಿಕೊಳ್ಳಬಹುದಾಗಿದೆ ಆದರೆ ಕೆಲವರು ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಮಲ್ಲಪ್ಪನಕೆರೆ ಎಂದು ಸುಳ್ಳು ದಾಖಲೆಗಳನ್ನು ಸಲ್ಲಿಸಿರುತ್ತಾರೆ.
ಸಣ್ಣ ನೀರಾವರಿ ಇಲಾಖೆ ಅಡಿಯಲ್ಲಿ ಬರುವ ಕೆರೆಗಳ ಸಂರಕ್ಷಣೆ ಅಧಿಕಾರಿಗಳ ಪ್ರಕಾರ ಅಸಲಿಗೆ ಈ ಸ್ಥಳದಲ್ಲಿ ಕೆರೆಯೇ ಇಲ್ಲ ಮತ್ತು ಕೆರೆ ನಿರ್ಮಿಸಲು ಈ ಸ್ಥಳ ಯೋಗ್ಯವಲ್ಲ ಎಂದು ವರದಿ ನೀಡಿರುತ್ತಾರೆ. ಆದರೂ ಕೆಲ ಪಟ್ಟಭದ್ರರ ಪಿತೂರಿಯಿಂದ ಲೋಕಾಯುಕ್ತರು ಸಹ ದಾಖಲಿಸಿಕೊಂಡು ತಾಸಿಲ್ದಾರರು ಮತ್ತು ಇತರೆ ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆ ಸಂರಕ್ಷಣೆ ಮಾಡುವಂತೆ ನೋಟಿಸ್ ಕೂಡ ನೀಡಿರುತ್ತಾರೆ ಇದು ಅಕ್ಷಮ್ಮವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ನ ವಿ. ಎಸ್ .ಶಿವಶಂಕರ್ ಮಾತನಾಡಿ, ಜಿಂದಾಲ್ ಕಂಪನಿಗೆ 30 ವರ್ಷಕ್ಕೆ ಲೀಸ್ ನೀಡಿದ ಜಮೀನನ್ನು ಮಾರಾಟ ಮಾಡಲು ಮುಂದಾಗಿದೆ, ಮೂರು ತಲೆಮಾರುಗಳಿಂದ ರೈತರು ಉಳಿಮೆ ಮಾಡುವ ಜಮೀನನ್ನು ಅವರಿಗೆ ಹಕ್ಕುಪತ್ರವನ್ನು ನೀಡಲು ಮೀನ ಮೇಷ ಎಣಿಸುತ್ತಿದೆ ಇದು ಸರ್ಕಾರದ ತಾರತಮ್ಯ ನೀತಿಯಾಗಿದೆ ಎಂದು ಖಂಡಿಸಿದರು.
1300 ಕೋಟಿ ಬೆಲೆಬಾಳುವ ಜಮೀನನ್ನು ಕೇವಲ ಇವತ್ತು ಕೋಟಿ ರೂಪಾಯಿಗಳಿಗೆ ಕಂಪನಿಗೆ ನೀಡುತ್ತಿರುವುದು ಖಂಡನೀಯ ಎಂದರು.
ಈ ಸಂದರ್ಭದಲ್ಲಿ ಕಾಳಿ ಪ್ರಸಾದ್, ಸೋಮಪ್ಪ, ಗೂಳಪ್ಪ, ರಂಗಪ್ಪ, ರುದ್ರಪ್ಪ, ಕೆಂಚಪ್ಪ, ಹನುಮಂತಪ್ಪ ಸೇರಿದಂತೆ ಇತರ ರೈತರಿದ್ದರು.