ಬಳ್ಳಾರಿ, ಸೆ.14: ಕಳೆದ ಹಲವು ವರ್ಷಗಳಿಂದ ನಗರದ ಸೆಂಟೆನರಿ ಸಭಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರತಿಷ್ಠಾಪಿಸುತ್ತಿರುವ ಹಿಂದೂ ಮಹಾ ಗಣಪತಿಯ ಶೋಭಾ ಯಾತ್ರೆಯು ಶುಕ್ರವಾರ ಸಂಜೆ ನಡೆಯಿತು.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ದಿಯವರು ಶೋಭಾ ಯಾತ್ರೆ ಆರಂಭಕ್ಕೂ ಮುನ್ನ ತೆರಳಿ ಹಿಂದೂ ಮಹಾ ಗಣಪತಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದರು.
ಸಂಘಟಕರು ಶಾಸಕ ನಾರಾ ಭರತ್ ರೆಡ್ಡಿಯವರಿಗೆ ಕೇಸರಿ ಪೇಟಾ ಸುತ್ತುವ ಮೂಲಕ ಗೌರವ ಸಲ್ಲಿಸಿದರು.
ಸೆಂಟೆನರಿ ಸಭಾಂಗಣದಿಂದ ಗಡಿಗಿ ಚನ್ನಪ್ಪ ವೃತ್ತದವರೆಗೆ ಶಾಸಕ ನಾರಾ ಭರತ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಹೆಜ್ಜೆ ಹಾಕಿದರು.
ಕುಡಿಯುವ ನೀರಿನ ವ್ಯವಸ್ಥೆ; ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ಶ್ರೀಗಣೇಶನ ಭಕ್ತರು, ವಿಶ್ವ ಹಿಂದೂ ಪರಿಷತ್ತಿನ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ 5 ಸಾವಿರ ನೀರಿನ ಬಾಟಲ್’ಗಳನ್ನು ಪೂರೈಸುವ ಮೂಲಕ ಶಾಸಕ ನಾರಾ ಭರತ್ ರೆಡ್ಡಿ ವೈಯಕ್ತಿಕವಾಗಿ ಭಕ್ತಿ ಸೇವೆಯನ್ನು ಸಲ್ಲಿಸಿದರು.
ಈ ಸಂದರ್ಭ ಮಹಾನಗರ ಪಾಲಿಕೆಯ ಸದಸ್ಯ, ತೆರಿಗೆ ನಿರ್ಧರಣೆ ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ನೂರ್ ಮಹಮ್ಮದ್, ಪಾಲಿಕೆಯ ಸದಸ್ಯ ಮಿಂಚು ಶ್ರೀನಿವಾಸ್, ಉದ್ಯಮಿ ಉಮೇಶ್ ರೆಡ್ಡಿ, ಶಬರಿ ರವಿ ಸೇರದಂತೆ ಹಲವರು ಹಾಜರಿದ್ದರು.