ಬಳ್ಳಾರಿ,ಅ,03: ವಸತಿ ಮತ್ತು ಶಿಕ್ಷಣ ಶಾಲೆಗಳಲ್ಲಿ ಮೆರಿಟ್ ಮೇಲೆ ಪ್ರವೇಶಾತಿ ನೀಡಿಲ್ಲ. ಇದು ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾಡಿದ ಅನ್ಯಾಯವಾಗಿದೆ ಈ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸ ಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಸಮಾಜ ಕಲ್ಯಾಣ ಸಚಿವರಿಗೆ ಪತ್ರ ಬರೆದು ಭೀಮವಾದ ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಮೆರಿಟ್ ಗೆ ತಿಲಾಂಜಲಿ ಹಾಡಿ, ತಮಗೆ ಬೇಕಾದವರಿಗೆ ಮೇರಿಟ್ ಇಲ್ಲದಿದ್ದರೂ ಸಹ ತಮ್ಮ ಲೇಟರ್ ಹೆಡ್ನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ಕಲ್ಪಿಸಿದ್ದಾರೆಂದು ಆರೋಪಿಸಿದ್ದಾರೆ.
ವಿಶೇಷ ತಂಡವನ್ನು ರಚನೆಮಾಡಿ ಕಾನೂನಾತ್ಮಕವಾಗಿ ತನಿಖೆ ಮಾಡಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯವನ್ನು ದೊರಕಿಸಬೇಕು. ತಪ್ಪು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯಾರೇ ಇದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಒತ್ತಾಯಿಸಿದೆ.
ಒಂದು ವಾರದ ಒಳಗೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ತಂಡದೊಂದಿಗೆ ಬೇಟಿ ಮಾಡಿ ತನಿಖೆ ಮಾಡಿಸಿ ವರದಿಯನ್ನು ನೀಡಬೇಕೆಂದು ಕೋರುತ್ತೇವೆ. ಒಂದು ವೇಳೆ ತನಿಖೆಯಾಗದಿದ್ದ ಪಕ್ಷದಲ್ಲಿ ಹೋರಾಟ ಮಾಡಲಾಗುವುದೆಂದು ಜಿಲ್ಲಾ ಸಂಚಾಲಕ ಗಾದಿಲಿಂಗ ಹೇಳಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಜೆ.ಎಸ್.ಶ್ರೀನಿವಾಸುಲು, ಮುಖಂಡರಾದ ಸಿದ್ದೇಶ ಉಳೂರು, ಜಿಲ್ಲಾ ಸಂಘಟನಾ ಸಂಚಾಲಕ ಪ್ರಸಾದ್, ಕುಡತಿನಿ ಗಿರೀಶ್ ಇನ್ನಿತರರಿದ್ದರು