ಹೊಸಪೇಟೆ (ವಿಜಯನಗರ): ತುಂಗಭದ್ರಾ ಬೋರ್ಡ್ ಅಧ್ಯಕ್ಷ ಎಸ್.ಎನ್.ಪಾಂಡೆ ಅವರ ಭೇಟಿ ಬೆನ್ನಲ್ಲೇ ಹೊಸಪೇಟೆಯಲ್ಲಿ ನ.22 ಅಥವಾ 23ರಂದು ರಂದು ತುಂಗಭದ್ರಾ ಮಂಡಳಿ ಸಭೆ ನಡೆಯಲಿದ್ದು, ಹೊಸ ಗೇಟ್ ಅಳವಡಿಸಲು ಅನುಮತಿ ದೊರೆಯುವ ಸದಾಶಯ ಮೂಡಿದೆ.
ನೀರಿನ ರಭಸಕ್ಕೆ ಆ.10ರಂದು ರಾತ್ರಿ 19ನೇ ಕ್ರಸ್ಟ್ಗೇಟ್ ಮುರಿದು ದುರಂತ ಸಂಭವಿಸಿತ್ತು. ಸ್ಟಾಪ್ಲಾಗ್ ಗೇಟ್ ಅಳವಡಿಸಿ ನೀರಿನ ಹರಿವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ. ಎಸ್.ಎನ್.ಪಾಂಡೆ ಅವರು, ಜಲಾಶಯದ ಸುರಕ್ಷತೆ ಹಾಗೂ ಸದ್ಯದ ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಗರಿಷ್ಠ ಮಟ್ಟದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.
ದುರಂತದ ಸಮಗ್ರ ತನಿಖೆಗೆ ತಜ್ಞ ಎ.ಕೆ.ಬಜಾಜ್ ನೇತೃತ್ವದ ತನಿಖಾ ಸಮಿತಿ ತನ್ನ ವರದಿಯನ್ನು ಸರಕಾರಕ್ಕೆ ನೀಡಿದೆ. 19ನೇ ಕ್ರಸ್ಟ್ಗೇಟ್ ದುರಂತದ ಬಳಿಕ ಜಲಾಶಯದ ಉಳಿದ ಎಲ್ಲಗೇಟ್ಗಳು ಮತ್ತು ಭದ್ರತೆಯ ಕುರಿತು ಗಂಭೀರ ಚರ್ಚೆಗಳು ನಡೆದಿದ್ದವು.
ಆದರೆ, ಇದೀಗ ಜಲಾಶಯದ ಎಲ್ಲ33 ಕ್ರಸ್ಟ್ಗೇಟ್ಗಳ ಸದೃಢತೆ (ಆರೋಗ್ಯ) ಪರಿಶೀಲಿಸಲಾಗುತ್ತದೆ. ಪರಿಶೀಲಿಸಿದ ನಂತರವೇ ಅಗತ್ಯಾನುಸಾರ ಗೇಟ್ ಬದಲಿಸಿ, ಹೊಸ ಗೇಟ್ ಅಳವಡಿಕೆ ಸೇರಿ ಎರಡು ಪ್ರಮುಖ ಅಂಶಗಳ ಆಧಾರದ ಮೇಲೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಮೂರು ರಾಜ್ಯ ಸರಕಾರಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಲಿದ್ದು, ಸಭೆಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಭೆ ಭಾರಿ ಕುತೂಹಲ ಮೂಡಿಸಿದೆ.
ಒಂದು ಸಭೆ, ಎರಡು ವಿಚಾರ:
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ13 ಲಕ್ಷ ಹೆಕ್ಟೇರ್ಗೂ ಅಧಿಕ ಕೃಷಿಭೂಮಿಯನ್ನು ತನ್ನ ವ್ಯಾಪ್ತಿಯಲ್ಲಿಹೊಂದಿದೆ. 19ನೇ ಕ್ರಸ್ಟ್ಗೇಟ್ ದುರಂತ ಸಂಭವಿಸಿದ ಸಂದರ್ಭದಲ್ಲಿ ಭೇಟಿ ನೀಡಿದ್ದ ತಜ್ಞರು, ಜಲಾಶಯದ ಸುಭದ್ರತೆ ಕಾಪಾಡಲು ಸರಕಾರ ತಕ್ಷಣ ಮುಂದಾಗಬೇಕು. 45 ವರ್ಷ ಆಯಸ್ಸಿನ ಕ್ರಸ್ಟ್ಗೇಟ್ಗಳು ಉತ್ತಮ ನಿರ್ವಹಣೆಯ ಕಾರಣದಿಂದ ಈಗಾಗಲೇ 70 ವರ್ಷ ಸವೆಸಿವೆ. ಆದಷ್ಟು ಬೇಗನೆ ಎಲ್ಲ33 ಗೇಟ್ಗಳನ್ನು ಬದಲಿಸಬೇಕಿದೆ ಎಂದು ಸಲಹೆ ನೀಡಿದ್ದರು. ಮತ್ತೊಂದೆಡೆ ತಜ್ಞ ಎ.ಕೆ.ಬಜಾಜ್ ಅವರ ನೇತೃತ್ವದ ಸಮಿತಿಯೂ ಗೇಟ್ಗಳ ಬದಲಾವಣೆಯ ಅವಶ್ಯಕತೆಯನ್ನು ವರದಿಯಲ್ಲಿಉಲ್ಲೇಖಿಸಿತ್ತು. ಈ ವರದಿ ಆಧಾರದ ಮೇಲೆ ಟಿಬಿ ಮಂಡಳಿ ಈಗಾಗಲೇ ಪ್ರಸ್ತಾವನೆ ಕೂಡ ಕಳಿಸಿದೆ. ಟಿಬಿ ಮಂಡಳಿ ಸಭೆಯಲ್ಲಿಈ ವಿಷಯಗಳು ಚರ್ಚೆಗೆ ಬರಲಿವೆ. ಮಂಡಳಿಯ ಅಧ್ಯಕ್ಷರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಹಿನ್ನೆಲೆ ಅಶಕ್ತ ಗೇಟ್ಗಳ ಬದಲಾವಣೆಗೆ ಅಸ್ತು ಸಿಗುವ ಭರಸವೆ ಮೂಡಿಸಿದೆ.
ಇದೇ ತಿಂಗಳ ಕೊನೆಯ ವಾರದಲ್ಲಿಟಿಬಿ ಬೋರ್ಡ್ ಸಭೆ ನಡೆಯಲಿದೆ. ಸಭೆಯ ನಿರ್ಣಯದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಮಂಡಳಿ ಅಧ್ಯಕ್ಷರು ಜಲಾಶಯಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ ಎಂದು ಟಿಬಿ ಬೋರ್ಡ್ ಕಾರ್ಯದರ್ಶಿಓ.ಆರ್.ಕೆ.ರೆಡ್ಡಿ ಹೇಳಿದ್ದಾರೆ.