ಬಳ್ಳಾರಿ,ಡಿ.21 : ಜಿಲ್ಲಾ ಪೊಲೀಸ್ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಅಪರಾಧ, ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ರಕ್ಷಣೆ ಮುಂತಾದ ಅಪರಾಧಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಶುಕ್ರವಾರ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ನಗರದ ಕನಕದುರ್ಗ ದೇವಸ್ಥಾನದ ಹತ್ತಿರದ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಗಳ ಕಚೇರಿ ಮುಖ್ಯದ್ವಾರದಿಂದ ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನಿ ಅವರು ಚಾಲನೆ ನೀಡಿದರು.
ಜಾಗೃತಿ ಜಾಥಾದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಎನ್ಸಿಸಿ ಕೆಡೆಟ್, ರೆಡ್ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು, ನಿವೃತ್ತ ಅರೆಸೇನಾ ಪಡೆ ಸಂಘ ಹಾಗೂ ಇತರೆ ಸಂಘಟನೆಗಳು ಭಾಗವಹಿಸಿದ್ದರು.
ಜಾಥಾವು ನಗರದ ಕನಕದುರ್ಗ ವೃತ್ತ, ವಾಲ್ಮೀಕಿ ಸರ್ಕಲ್, ಅಂಬೇಡ್ಕರ್ ಸರ್ಕಲ್, ಹೆಚ್.ಆರ್.ಗವಿಯಪ್ಪ ವೃತ್ತ, ಗಡಗಿ ಚೆನ್ನಪ್ಪ ವೃತ್ತ ಸಾಗಿ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆ, ಸೈಬರ್ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಬಳಿಕ ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಅಣಕು ಪ್ರದರ್ಶನ ನಡೆಸಿಕೊಟ್ಟರು.
ಈ ವೇಳೆ ಸಿರುಗುಪ್ಪ ಡಿಎಸ್ಪಿ ವೆಂಕಟೇಶ್, ಡಿಎಆರ್ನ ಡಿಎಸ್ಪಿ ತಿಪ್ಪೇಸ್ವಾಮಿ, ಸಂಚಾರ ಪೊಲೀಸ್ ಠಾಣೆಯ ಪಿಐ ಅಯ್ಯನಗೌಡ ಪಾಟೀಲ್ ಸೇರಿದಂತೆ ಇತರರು ಭಾಗವಹಿಸಿದ್ದರು.