ಬಳ್ಳಾರಿ,ಜ.09: ಬಳ್ಳಾರಿ ಲಾರಿ ಮಾಲೀಕರ ಸಂಘದಲ್ಲಿ ಆಗಾಗ ಬಣ ಜಗಳ ನಡೆಯುತ್ತಿದ್ದು, ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಒಂದು ಗುಂಪು ಮತ್ತೊಂದು ಗುಂಪಿನ ಮೇಲೆ ದಾಳಿ ನಡೆಸುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದರ ಅಂಗವಾಗಿ ಲಾರಿ ಟರ್ಮಿನಲ್ ಗಳಲ್ಲಿ ಬುಧವಾರ ಲಾರಿ ಸಂಘದ ಮಾಜಿ ಅಧ್ಯಕ್ಷ ಪೇದ್ದನ್ನ ಹಾಗೂ ಚಾಲಕರ ಅಸೋಸಿಯೇಷನ್ ಅಧ್ಯಕ್ಷ ಸದಸ್ಯ ನಾರಾಯಣ ಸ್ವಾಮಿ ಅವರ ಮೇಲೆ ಮತ್ತೊಂದು ವರ್ಗ ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಬಿಮ್ಸ್ ಸೇರಿದ್ದಾರೆ. ಇಬ್ಬರಲ್ಲಿ ನಾರಾಯಣಸ್ವಾಮಿ ಅವರ ತಲೆ, ಬೆನ್ನು ಮತ್ತು ಬಲಗೈಗೆ ಗಂಭೀರ ಗಾಯಗಳಾಗಿದ್ದು, ಬಿಮ್ಸ್ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಪೆದ್ದನ್ನ ಬುಧವಾರ ರಾತ್ರಿ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಳ್ಳಾರಿ ಲಾರಿ ಮಾಲೀಕರ ಸಂಘ ಕಳೆದ ಒಂದು ವರ್ಷದಿಂದ ವರ್ಗ ಸಮರ ನಡೆಸುತ್ತಿದೆ. ಸ್ಥಳೀಯ ಮುಖಂಡರು ಒಂದೇ ಗುಂಪಿನಲ್ಲಿರುವುದರಿAದ ಬಳ್ಳಾರಿ ಮಾಲೀಕರ ಸಂಘದ ಅಧ್ಯಕ್ಷ ಸ್ಥಾನದಿಂದ ಬಲವಂತದಿAದ ಕೆಳಗಿಳಿಸಲಾಯಿತು ಎಂದು ಮಾಜಿ ಅಧ್ಯಕ್ಷ ಪೆದ್ದಣ್ಣ ಆರೋಪಿಸಿದರು.
ತಾವಿಬ್ಬರೂ ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲದ ಕಾರಣ ಒತ್ತಾಯಪೂರ್ವಕವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಾಯಿತು ಎಂದು ಅವರು ಪೊಲೀಸ್ ದೂರಿನಲ್ಲಿ ಹೇಳಿದ್ದಾರೆ.
ಘಟನೆ ವಿವರ: ಬುಧವಾರ ಬೆಳಗ್ಗೆ ೧೧.೩೦ಕ್ಕೆ ಲಾರಿ ಟರ್ಮಿನಲ್ ಓಂ ಸಾಯಿ ಸಾರಿಗೆ ಕಚೇರಿಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದ ವೇಳೆ ಮುಲ್ಲಾ ಸಮೀರ್, ಬಳ್ಳಾರಿ ನಗರದ ಎಂಎಸ್ಟಿ ಮೆಹಬೂಬ್ ಭಾಷಾ ಅವರ ಪುತ್ರ ಮುಲ್ಲಾ ಸಾಜಿದ್ ಮತ್ತು ಸ್ನೇಹಿತರಾದ ಸುಹೇಲ್, ಮೆಹಬೂಬ್ ಭಾಷಾ ಮತ್ತು ಶ್ರೀನಿವಾಸ್ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ. ದಲಿತರು ಎಂಬAತೆ ಜಾತಿ ನಿಂದನೆ ಮಾಡುತ್ತಾ ಒಬ್ಬರ ಹಿಂದೆ ಒಬ್ಬರಂತೆ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ವೇಳೆ ನಾರಾಯಣ ಸ್ವಾಮಿಗೆ ತಲೆ, ಎದೆ ಹಾಗೂ ಬಲಗೈಗೆ ತೀವ್ರವಾಗಿ ಪೆಟ್ಟು ಬಿದ್ದಿದೆ ಎಂದು ದೂರಿದರು. ಪ್ರಸ್ತುತ ಲಾರಿ ಸಂಘದಲ್ಲಿರುವ ಕೆಲವರಿಂದ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಮಾಜಿ ಅಧ್ಯಕ್ಷರು ಪೊಲೀಸರ ರಕ್ಷಣೆ ಬಯಸಿದ್ದಾರೆ. ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಬ್ರೂಸ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.