ಬಳ್ಳಾರಿ, ಫೆ.3: ಬಾಪೂಜಿ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆ ನುಗ್ಗಿ ಸಿನಿಮೀಯ ರೀತಿಯಲ್ಲಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ವ್ಯಕ್ತಿಯೋರ್ವ ತಲೆಗೆ ಹೆಲ್ಮೆಟ್ ಹಾಕಿಕೊಂಡು, ಕೈನಲ್ಲಿ ಕಬ್ಬಿಣದ ರಾಡು ಹಿಡುಕೊಂಡು ಬಾರ್ರೆಲೇ ಎಂದು ಕೂಗಾಡುತ್ತ. ರಸ್ತೆಯಲ್ಲಿದ್ದ ಬೈಕ್ಗಳನ್ನು ಚಿದ್ರ ಮಾಡುತ್ತ ಶ್ರೀನಿವಾಸ್ ಎಂಬವವರ ಮನೆ ಮೇಲೆ ಹಲವರೊಂದಿಗೆ ದಾಳಿ ಮಾಡಿ ಬಾಗಿಲು ಮುರಿದು ಒಳಹೊಕ್ಕು ಹಲವರ ಮೇಲೆ ಹಲ್ಲೆ ಮಾಡಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದ್ದು. ಘಟನೆಯ ದೃಶ್ಯಾವಾಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ಬಗ್ಗೆ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನಲೆ:
ಕ್ಷುಲ್ಲಕ ಕಾರಣಕ್ಕೆ ಜ. 31 ರಂದು ಶ್ರೀನಿವಾಸ್ ಕುಟುಂಬದ ಬಾಲಕನ ಮೇಲೆ ರಾಜ ಅಲಿಯಾಸ್ ಮಾರ್ಕೆಟ್ ರಾಜನ ಗ್ಯಾಂಗ್ ನಿಂದ ಹಲ್ಲೆ ಮಾಡಲಾಗಿತ್ತು. ಹೀಗಾಗಿ ಹಲ್ಲೆ ಮಾಡಿದ ಪುಡಿ ರೌಡಿಗಳ ವಿರುದ್ದ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದತ್ತು ಶ್ರೀನಿವಾಸ್ ಕುಟುಂಬ. ಶ್ರೀನಿವಾಸ್ ಕುಟುಂಬ ಪ್ರಕರಣ ದಾಖಲಿಸಿದ ಬಳಿಕ ಕೌಂಟರ್ ಕೇಸ್ ದಾಖಲಿಸಿದ ರಾಜನ ಗ್ಯಾಂಗ್. ಅಷ್ಟಕ್ಕೇ ಸುಮ್ಮನಾಗದೇ ನಮ್ಮ ಮೇಲೆ ದೂರು ನೀಡ್ತೀರಾ ಎಂದು ಸಿಟ್ಟಿನಿಂದ ಮತ್ತೆ ಶನಿವಾರ ರಾತ್ರಿ ಮನೆ ಬಳಿ ಹೋಗಿ ರಾಜ, ನಂದೀಶ್, ಮಹೇಶ್, ಸೂರಿ, ಹಳೇ ಕೋಟೆ ರಾಜ, ಚಿನ್ನಾ, ಪಾಂಡು, ಮಹೇಶ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಂದ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಶ್ರೀನಿವಾಸ್ ಅವರ ತಾಯಿ ಗೌರಮ್ಮಗೆ ತೀವ್ರಗಾಯವಾಗಿ ಆಸ್ಪತ್ರೆಗೆ ದಾಖಲಾಗಿದೆ. ಶ್ರೀನಿವಾಸ್ ಹಾಗೂ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ ರಾಜನ ಗ್ಯಾಂಗ್ ಮೇಲೆ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.