ಬಳ್ಳಾರಿ,ಫೆ.11:ನಿಮ್ಮ ಮನಸಿನ ಮಾತು ಕೇಳಿ, ನಿಮ್ಮ ಮನಸ್ಸಾಕ್ಷಿಗೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಿ, ಅಂದುಕೊಂಡ ಗುರಿ ತಲುಪಲು ಧೈರ್ಯ ಬಹಳ ಮುಖ್ಯ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಸೋಮವಾರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ಎನ್ಎಸ್ಎಸ್, ಕ್ರೀಡೆ, ಸಾಂಸ್ಕೃತಿಕ ಮತ್ತು ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಕಾಲೇಜು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ದಿನನಿತ್ಯದ ಬದುಕಿನಲ್ಲಿ ಸಲಹೆ ನೀಡುವವರು ಸಾವಿರ ಜನ, ಆದರೆ ಬದುಕಿನಲ್ಲಿ ಬರುವ ಕಷ್ಟ ನಷ್ಟಗಳೆಲ್ಲ ನಮಗೇ ಸೇರಿದಂಥವು, ಹೀಗಾಗಿ ನಾವು ಕೈಗೊಳ್ಳುವ ತೀರ್ಮಾನ ಗಟ್ಟಿಯಾಗಿರಬೇಕು ಎಂದರು.
ಧೈರ್ಯ ಮಾಡದ ಹೊರತು ಸಾಧನೆ ಮಾಡಲು ಸಾಧ್ಯವಿಲ್ಲ, ಧೈರ್ಯವಂತರಾಗಿ ಎಂದು ಕರೆ ನೀಡಿದ ಅವರು, ನಮ್ಮ ಪೋಷಕರು ನಮ್ಮ ಬದುಕು ಹಸನಾಗಲಿ ಎಂದು ಕಷ್ಟಪಟ್ಟು ದುಡಿಯುತ್ತಾರೆ, ಹೀಗಾಗಿ ನಾವು ಸನ್ಮಾರ್ಗದಲ್ಲಿ ನಡೆದು ಸಾಧನೆ ಮಾಡಬೇಕೇ ವಿನಹ ದುರ್ಮಾರ್ಗಿಯಾಗಬಾರದು ಎಂದರು.
ನಮ್ಮ ಜೀವನ ರುಪಿಸಿಕೊಳ್ಳಲು ಅಂಕಗಳೇ ಮುಖ್ಯವಲ್ಲ, ಸಾಧಾರಣ ಅಂಕ ಗಳಿಸಿದ ನೂರಾರು ಜನ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ಒಬ್ಬ ವಿದ್ಯಾರ್ಥಿಯಾಗಿ ಸಾಧಾರಣ ವಿದ್ಯಾರ್ಥಿಯಾಗಿದ್ದ ನಾನು ಇಂದು ಜನರ ಆಶೀರ್ವಾದದಿಂದ ಶಾಸಕನಾಗಿದ್ದೇನೆ ಎಂದು ಹೇಳಿದರು.
ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ, ಉಪನ್ಯಾಸಕರ ಪಾತ್ರ ದೊಡ್ಡದು ಹೀಗಾಗಿ ಅವರ ಮಾರ್ಗದರ್ಶನ, ಸಲಹೆಗಳನ್ನು ನಿರ್ಲಕ್ಷ್ಯ ಮಾಡದಿರಿ ಎಂದರು.
ಬಾಲಕಿಯರ ಸರ್ಕಾರಿ ಪಿಯು ಕಾಲೇಜಿಗೆ ವ್ಯಾಸಂಗಕ್ಕಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಿಂದ ಬಂದಿರುವ ನೀವು ಉತ್ತಮ ಸಾಧನೆ ಮಾಡಿದರೆ ಒಬ್ಬ ಅಣ್ಣನಾಗಿ ನನಗೆ ಹೆಮ್ಮೆ ಎನಿಸುತ್ತದೆ, ನಿಮ್ಮ ಸಾಧನೆಯನ್ನು ನಾನು ಹೇಳಿಕೊಳ್ಳಬಹುದು ಎಂದರು.
ಕ್ರೀಡಾ ವಿಭಾಗದಲ್ಲಿ ಆಸಕ್ತಿ ಇದ್ದು, ನಿರ್ದಿಷ್ಟ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸಿದ್ದವರು ನನ್ನನ್ನು ಸಂಪರ್ಕಿಸಿ; ನಮ್ಮ ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಅಗತ್ಯ ತರಬೇತಿ ಕೊಡಿಸುವ ಜವಾಬ್ದಾರಿ ನನ್ನದು ಎಂದರು.
ವಿವಿಧ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಮಾಣ ಪತ್ರಗಳನ್ನು ವಿತರಿಸಿದರು.
ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಉಪ ಮೇಯರ್ ಡಿ.ಸುಕುಂ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ.ಪಾಲಾಕ್ಷ, ಪ್ರಾಂಶುಪಾಲೆ ಸುಲೇಖಾ. ಬಿ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಶಮೀಮ್ ಜೊಹರಾ, ಅಭಿನಯ ಅಭಿಲಾಷ್, ತ್ರಿವೇಣಿ ಪತ್ತಾರ, ಮಮತ ಬಿಂಗಿ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ರಾಜಣ್ಣ ಮತ್ತಿತರರು ಹಾಜರಿದ್ದರು.