ಕೊಪ್ಪಳ: ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಹುಳು, ನುಸಿ ಹತ್ತಿರುವ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಅಪಾಯವಿದೆ. ಕಳಪೆ ಗುಣಮಟ್ಟದ ಅಕ್ಕಿ, ತೊಗರಿಬೇಳೆ ಪೂರೈಕೆಯಿಂದಾಗಿ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಬಾರಿ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಕೇಳಿಬಂದಿದೆ.
ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹಸಿವಿನಿಂದ ಬಳಲಬಾರದು ಅಂತ ಸರ್ಕಾರ ಮಧ್ಯಾಹ್ನ ಬಿಸಿ ಊಟ ಯೋಜನೆಯನ್ನು ಜಾರಿಗೊಳಿಸಿದೆ. ಅದರಂತೆ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ಜೊತೆಗೆ ಅನ್ನ, ಸಾರು ಸೇರಿದಂತೆ ಪ್ರತಿನಿತ್ಯ ಒಂದೊಂದು ರೀತಿಯ ಆಹಾರವನ್ನು ನೀಡಲಾಗುತ್ತದೆ. ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗೆ ಹುಳು, ನುಸಿ ಹತ್ತಿರುವ ಆಹಾರ ಧಾನ್ಯಗಳ ಪೂರೈಕೆಯಾಗುತ್ತಿವೆ. ಮಕ್ಕಳು ಪ್ರತಿನಿತ್ಯ ಹುಳು, ನುಸಿ ಇರುವ ಆಹಾರ ಸೇವಿಸುವಂತಾಗಿದೆ.
ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣ, ಗಂಗಾವತಿ ತಾಲೂಕು, ಕೊಪ್ಪಳ ತಾಲೂಕು ಸೇರಿದಂತೆ ಬಹುತೇಕ ಶಾಲೆಯಲ್ಲಿ ಕಳೆದ ಕೆಲ ತಿಂಗಳಿಂದ ಕಳಪೆ ಆಹಾರ ಧಾನ್ಯಗಳು ಶಾಲೆಗೆ ಪೂರೈಕೆಯಾಗಿವೆ. ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳು ಸೇರಿ ಒಟ್ಟು 2.8 ಲಕ್ಷ ಮಕ್ಕಳಿಗೆ ಪ್ರತಿನಿತ್ಯ ಮಧ್ಯಾಹ್ನದ ಬಿಸಿ ಊಟವನ್ನು ನೀಡಲಾಗುತ್ತದೆ. ಜಿಲ್ಲೆಯ ಬಹುತೇಕ ಕಡೆ ಶಾಲೆಯಲ್ಲಿಯೇ ಆಹಾರವನ್ನು ತಯಾರು ಮಾಡಿ ನೀಡಲಾಗುತ್ತದೆ. ಮಕ್ಕಳು ಊಟ ಮಾಡುವಾಗ ಅನ್ನ, ಸಾರಿನಲ್ಲಿ ನುಸಿ, ಹುಳುಗಳು ಸಿಗುತ್ತಿವೆ. ಇದಕ್ಕೆ ಕಾರಣ, ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಕಳಪೆ ಆಹಾರ ಧಾನ್ಯಗಳು.
ಜಿಲ್ಲೆಯ ವಿವಿಧ ಗೂಡೌನ್ಗಳಿಂದ ಅಕ್ಕಿ ಪೂರೈಕೆಯಾದರೇ, ತೊಗರಿಬೇಳೆ, ಎಣ್ಣೆ ಸೇರಿದಂತೆ ಬೇರೆ ಪದಾರ್ಥಗಳು ಟೆಂಡರ್ ಪಡೆದಿರುವ ಏಜನ್ಸಿಗಳು ಶಾಲೆಗೆ ಪೂರೈಗೆ ಮಾಡುತ್ತವೆ. ಆದರೆ, ಖಾಸಗಿ ಗುತ್ತಿಗೆದಾರರು ಕೂಡಾ ಹಣದಾಸೆಗೆ ಕಳಪೆ ಮಟ್ಟದ ತೊಗರಿ ಬೇಳೆ ಪೂರೈಕೆ ಮಾಡಿದ್ದಾರೆ. ಜೊತೆಗೆ ವಿವಿಧ ಗೂಡೌನ್ಗಳಿಂದ ಪೂರೈಕೆಯಾಗುತ್ತಿರುವ ಅಕ್ಕಿ ಕೂಡ ಕಳಪೆಯಾಗಿದೆ.
ಅನೇಕ ಶಾಲೆಯಲ್ಲಿ ಅಡುಗೆ ಸಿಬ್ಬಂದಿ, ಮಕ್ಕಳ ಆರೋಗ್ಯ ದೃಷ್ಟಿಯಿಂದ ಹೆಚ್ಚುವರಿ ಕೆಲಸವನ್ನು ಮಾಡಿ, ಬಂದಿರುವ ಕಳಪೆ ಆಹಾರ ಧಾನ್ಯಗಳನ್ನು ಸ್ವಚ್ಚಗೊಳಿಸಿ, ಅಡುಗೆ ಮಾಡಿ ನೀಡುತ್ತಿದ್ದಾರೆ. ಆದರೂ ಕೂಡಾ ನುಸಿ, ಹುಳುಗಳು ಆಹಾರದಲ್ಲಿ ಪತ್ತೆಯಾಗ್ತಿವೆಯಂತೆ. ನೀರಲ್ಲಿ ಕುದಿಸಿದ ಮೇಲೆ ತೊಗರಿ ಬೇಳೆಯೊಳಗೆ ಇರುವ ಹುಳುಗಳು ಹೊರಗೆ ಬಂದಾಗಲೇ ಅನೇಕ ಸಲ ಹುಳುಗಳು ಇರುವುದು ಗೊತ್ತಾಗುತ್ತಿದೆಯಂತೆ. ಅನೇಕ ಕಡೆ ಅಡುಗೆ ಸಿಬ್ಬಂದಿ ಸರಿಯಾಗಿ ಆಹಾರ ಸ್ವಚ್ಚ ಮಾಡದೇ ಅಡುಗೆ ಮಾಡುವುದರಿಂದ, ಅಲ್ಲಿನ ಮಕ್ಕಳು ಅನ್ನ, ಸಾರು ತಿನ್ನಲು ಕೂಡ ಕಷ್ಟಪಡುತ್ತಿದ್ದಾರೆ. ಹೀಗಾಗಿ, ಆಹಾರವನ್ನು ಮಕ್ಕಳು ಚೆಲ್ಲುತ್ತಿದ್ದಾರೆ. ಇಂತಹ ಆಹಾರವನ್ನು ಹೇಗೆ ತಿನ್ನುವುದು ಅಂತ ವಿದ್ಯಾರ್ಥಿಗಳು ಶಿಕ್ಷಕರಿಗೆ ಪ್ರಶ್ನಿಸುತ್ತಿದ್ದಾರೆ. ಶಿಕ್ಷಕರು ನಿರುತ್ತರರಾಗುತ್ತಿದ್ದಾರೆ. ಹೀಗಾಗಿ ಹಲವಡೆ ಮಕ್ಕಳು ಮನೆಯಿಂದಲೇ ಊಟವನ್ನು ತೆಗದುಕೊಂಡು ಹೋಗುತ್ತಿದ್ದಾರೆ.
ಪ್ರತಿ ತಿಂಗಳು ಆಹಾರ ಧಾನ್ಯ ಪೂರೈಕೆದಾರರಿಗೆ ಅಡುಗೆ ಸಿಬ್ಬಂದಿ, ಶಾಲೆಯ ಶಿಕ್ಷಕರು, ಕಳಪೆ ಆಹಾರ ಧಾನ್ಯಗಳ ಪೂರೈಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ ಬಿಸಿ ಊಟ ಯೋಜನೆ ಅಧಿಕಾರಿಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಲೇ ಇದ್ದಾರೆ. ಆದರೆ, ಯಾರು ಕೂಡಾ ಯಾವ ಕ್ರಮವನ್ನು ಕೈಗೊಳ್ಳುತ್ತಿಲ್ಲವಂತೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ಕೇಳಿದರೇ, ಅಧಿಕಾರಿಗಳಿಗೆ ಈ ಬಗ್ಗೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡುವುದಾಗಿ ಹೇಳಿದ್ದಾರೆ.
ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಬಿಸಿ ಊಟದ ಯೋಜನೆಗೆ ಕಳಪೆ ಅಕ್ಕಿ, ಕಳಪೆ ತೊಗರಿ ಬೇಳೆ ಪೂರೈಕೆಯಾಗುತ್ತಿದೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಗೊತ್ತಿದ್ದರೂ ಕೂಡಾ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಳಪೆ ಆಹಾರ ತಿಂದು ಮಕ್ಕಳ ಆರೋಗ್ಯ ಹದಗೆಡುವ ಮೊದಲೇ ಇಲಾಖೆ ಎಚ್ಚೆತ್ತುಕೊಂಡು, ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುವ ಕೆಲಸ ಮಾಡಬೇಕು.