ಬೆಂಗಳೂರು, ಮೇ 17: ರಾಜ್ಯ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ಬೆಲೆಗಳನ್ನು ಏರಿಕೆ ಮಾಡುತ್ತಲೇ ಇದೆ. ಸತತ ದರ ಏರಿಕೆಯಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ. ರಾಜ್ಯ ಸರ್ಕಾರ ಇತ್ತೀಚಿಗೆ ಬಿಯರ್, ಐಎಂಎಲ್ ಬೆಲೆ ಏರಿಕೆ ಮಾಡಿತ್ತು. ಇದರ ಬೆನ್ನಲ್ಲೆ ರಾಜ್ಯ ಸರ್ಕಾರ ಮದ್ಯ ಮಾರಾಟಗಾರರಿಗೂ ಶಾಕ್ ನೀಡಿದೆ. ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ಶುಲ್ಕ ದುಪ್ಪಟ್ಟು ಮಾಡಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ಗಳ ವಾರ್ಷಿಕ ಲೈಸೆನ್ಸ್ ಶುಲ್ಕ ದಿಢೀರ್ ಏರಿಕೆ ಮಾಡಿದೆ. ಲೈಸೆನ್ಸ್ ಶುಲ್ಕ ದುಪ್ಪಟ್ಟು ಹೆಚ್ಚಳ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಶುಲ್ಕ, ಸೆಸ್ ಸೇರಿ ಬರೋಬ್ಬರಿ ಲೈಸೆನ್ಸ್ ಶುಲ್ಕ ಶೇ. 100 ರಷ್ಟು ಆಗಿದೆ.
ಹಾಗಿದ್ದರೆ ಯಾವುದರ ಲೈಸೆನ್ಸ್ ದರ ಎಷ್ಟಿದೆ? ಎಷ್ಟಾಗಲಿದೆ?
· CL9 ಬಾರ್ ಅಂಡ್ ರೆಸ್ಟೋರೆಂಟ್
ಮೊದಲು ಲೈಸೆನ್ಸ್ ಶುಲ್ಕ 8,62,000 ರೂ.
ಈಗ ಶುಲ್ಕ 15,00,000 ರೂ. ಆಗಿದೆ.
ಇದರಲ್ಲಿ ಸೆಸ್ 2,25,000 ರೂ. ಇದೆ
ಒಟ್ಟು 17,25,000 ರೂ. ಆಗಿದೆ
· CL 6 A (ಸ್ಟಾರ್ ಹೊಟೇಲ್ಗಳಲ್ಲಿ ಮದ್ಯ ಮಾರಟಕ್ಕಾಗಿ)
ಮೊದಲು ಲೈಸೆನ್ಸ್ ಶುಲ್ಕ 9,75,000 ರೂ.
ಈಗಿನ ಲೈಸೆನ್ಸ್ ಶುಲ್ಕ – 20 ಲಕ್ಷ ರೂ.
ಸೆಸ್- 3 ಲಕ್ಷ ರೂ.
ಒಟ್ಟು-23 ಲಕ್ಷ ರೂ.
· CL 7 (ಹೋಟೆಲ್ ಮತ್ತು ವಸತಿ ನಿಲಯಗಳಲ್ಲಿ ಮದ್ಯ ಮಾರಟಕ್ಕಾಗಿ)
ಮೊದಲು ಲೈಸೆನ್ಸ್ ಶುಲ್ಕ- 9,75,000 ರೂ.
ಈಗಿನ ಶುಲ್ಕ- 17,00,000 ರೂ.
ಸೆಸ್- 2,55,000 ರೂ.
ಒಟ್ಟು – 19,550,00 ರೂ.
“ಸರ್ಕಾರ ಈಗಾಗಲೇ ನೀರು, ವಿದ್ಯುತ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಇದೀಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಲೈಸನ್ಸ್ ಶುಲ್ಕ ಸರ್ಕಾರ ಏರಿಕೆ ಮಾಡಿದೆ. ದಿನಕ್ಕೆ 110 ಕೋಟಿ ರೂ. ವಾರ್ಷಿಕವಾಗಿ 40 ಸಾವಿರ ಕೋಟಿ ರೂ. ಸುಂಕ ಅಬಕಾರಿ ಇಲಾಖೆಗೆ ನೀಡುತ್ತಿದ್ದೇವೆ. ಇದರ ನಡುವೆ ಲೈಸನ್ಸ್ ದರ ಏರಿಕೆ ಮಾಡಿರುವುದು ಅವೈಜ್ಞಾನಿಕ ಎಂದು ಬೆಂಗಳೂರು ಹೊಟೇಲ್ ಮಾಲೀಕರ” ಸಂಘದ ಗೌರವಾಧ್ಯಕ್ಷ ಪಿ.ಸಿ ರಾವ್ ಅಸಮಾಧಾನ ವ್ಯಕ್ತಪಡಿಸಿದರು.