ಬಳ್ಳಾರಿ,ಸೆ.30 : ಜಿಲ್ಲೆಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯದಲ್ಲಿ ಗುರುತಿಸಲಾದ 3.85 ಲಕ್ಷ ಮನೆಗಳ ಪೈಕಿ 1.45 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ. ಈವರೆಗೆ ಶೇ.38 ರಷ್ಟು ಪ್ರಗತಿಯಾಗಿದ್ದು, ರಾಜ್ಯದ ಕ್ರಮಾಂಕದಲ್ಲಿ 15 ನೇ ಸ್ಥಾನದಲ್ಲಿದ್ದೇವೆ. ಇನ್ನೂ ಸಮೀಕ್ಷಾ ಕಾರ್ಯಕ್ಕೆ ವೇಗ ನೀಡಬೇಕು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಸಮೀಕ್ಷೆಯ ನೋಡಲ್ ಅಧಿಕಾರಿಗಳು, ವರ್ಚುವಲ್ ಮೂಲಕ ಸಂಡೂರು ತಾಲ್ಲೂಕು ತಹಶೀಲ್ದಾರರೊಂದಿಗೆ ಸಮೀಕ್ಷೆಯ ಪ್ರಗತಿ ಸಭೆ ನಡೆಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯ ಆರಂಭಗೊAಡು 08 ದಿನಗಳಾಗಿವೆ. ಇನ್ನುಳಿದ ದಿನಗಳಲ್ಲಿ ನಿಗದಿತ ಗುರಿ ತಲುಪಲು ಮತ್ತು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರಿಸಲು ಸೂಕ್ತ ತಾಂತ್ರಿಕ ಯೋಜನೆ ರೂಪಿಸಿ ಗಣತಿದಾರರಿಗೆ ಸೂಕ್ತ ಮಾರ್ಗದರ್ಶನ ಮಾಡಬೇಕು ಎಂದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ತಾಲ್ಲೂಕುಗಳು ಸಮೀಕ್ಷಾ ಕಾರ್ಯ ಅಂತ್ಯಕ್ಕೆ ನಿಗದಿತ ಗುರಿ ತಲುಪಲಿವೆ. ಸಂಡೂರು ಮತ್ತು ಬಳ್ಳಾರಿ ತಾಲ್ಲೂಕುಗಳಿಂದ ನಿರೀಕ್ಷೆಗಿಂತ ಫಲಿತಾಂಶ ಲಭಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಜೊತೆಗೂಡಿ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂದು ತಿಳಿಸಿದರು.
ಸಂಡೂರು ಭಾಗದಲ್ಲಿ 79 ಸಾವಿರ ಮನೆಗಳ ಪೈಕಿ ತೋರಣಗಲ್ಲು ಮತ್ತು ವಡ್ಡು ಗ್ರಾಮಗಳ ತಲಾ 10 ಸಾವಿರ ಮನೆಗಳಿದ್ದು, ಅದರಲ್ಲಿ ತೋರಣಗಲ್ಲಿನಲ್ಲಿ ಜಿಂದಾಲ್ ವ್ಯಾಪ್ತಿಯಲ್ಲಿ 6 ಟೌನ್ ಶಿಪ್ಗಳಿವೆ. ಇಲ್ಲಿ ಸಮೀಕ್ಷಾ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದೆ. ಹಾಗಾಗಿ ಟೌನ್ ಶಿಪ್ ಗಳಲ್ಲಿ ಶಿಬಿರ (ಕ್ಯಾಂಪ್) ಆಯೋಜಿಸುವ ಮೂಲಕ ಈಗಾಗಲೇ ಗುರುತಿಸಲಾದ ಮನೆಗಳನ್ನು ಸಮೀಕ್ಷಾ ಕಾರ್ಯಕ್ಕೆ ಒಳಪಡುವಂತೆ ತಿಳಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮಮದ್ ಹ್ಯಾರೀಸ್ ಸುಮೈರ್ ಅವರು ಮಾತನಾಡಿ, ಸಂಡೂರಿನ ತೋರಣಗಲ್ಲು ಮತ್ತು ವಡ್ಡು ಗ್ರಾಮಗಳಲ್ಲಿ ಹೊರ ರಾಜ್ಯದಿಂದ ಬಂದು ಒಂದು ಮನೆಯಲ್ಲಿ 10 ಕ್ಕೂ ಹೆಚ್ಚು ಜನ ವಾಸವಿರುತ್ತಾರೆ. ಅಲ್ಲಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ಪಡೆದುಕೊಂಡು ಗಣತಿ ನಡೆಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಆಸ್ಪದ ನೀಡುವಂತಿಲ್ಲ ಎಂದು ಸಂಡೂರು ತಾಲ್ಲೂಕು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಮಾತನಾಡಿ, ಬಳ್ಳಾರಿ ಮಹಾನಗರ ವ್ಯಾಪ್ತಿಯಲ್ಲಿ ಪ್ರತಿ ಎರಡು ವಾರ್ಡ್ ಗಳಿಗೆ ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯನ್ನು ಸಮೀಕ್ಷಾ ಕಾರ್ಯದ ಮೇಲ್ವಿಚಾರಣೆಗಾಗಿ ನೋಡೆಲ್ ಅಧಿಕಾರಿಯನ್ನಾಗಿ ನೇಮಿಸಿದೆ. ಆದರೂ ಪ್ರಗತಿ ಕಾಣುತ್ತಿಲ್ಲ. ಅಧಿಕಾರಿಗಳು ನಿಲ್ಯಕ್ಷ ತೋರದೇ ಕಾಳಜಿ ವಹಿಸಿ ಕೆಲಸ ಮಾಡಬೇಕು. ಸ್ಪಂದಿಸದಿರುವ ಸೂಪರ್ ವೈಸರ್ ಗಳ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಅವರು ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಒಟ್ಟು 171 ಗಣತಿದಾರರಿದ್ದು, ಅದರಲ್ಲಿ ಕೇವಲ 36 ಗಣತಿದಾರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಉಳಿದವರು ಸ್ಪಂದಿಸುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಅಂತಹವರನ್ನು ಗುರುತಿಸಿ ಅಮಾನತ್ತಿಗೆ ಶಿಫಾರಸ್ಸು ಮಾಡಬೇಕು. ಇನ್ನಿತರೆ ಸಿಬ್ಬಂದಿ ಇದಲ್ಲಿ ಅವರನ್ನು ನಿಯೋಜನೆ ಮಾಡಿಕೊಳ್ಳಬೇಕು. ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯವರೊಂದಿಗೆ ಸಮನ್ವತೆ ಸಾಧಿಸಬೇಕು ಎಂದು ತಿಳಿಸಿದರು.
*ತಾಲ್ಲೂಕುವಾರು ಪ್ರಗತಿ(ಇಲ್ಲಿಯವರೆಗೆ):*
ಬಳ್ಳಾರಿ ತಾಲ್ಲೂಕು: 1.75 ಲಕ್ಷ ಮನೆಗಳ ಪೈಕಿ 53 ಸಾವಿರ ಮನೆ ಪೂರ್ಣ.
ಕಂಪ್ಲಿ: 33 ಸಾವಿರ ಮನೆಗಳ ಪೈಕಿ 16 ಸಾವಿರ ಮನೆ ಪೂರ್ಣ.
ಕುರುಗೋಡು: 27 ಸಾವಿರ ಮನೆಗಳ ಪೈಕಿ 15 ಸಾವಿರ ಮನೆ ಪೂರ್ಣ.
ಸಂಡೂರು: 79 ಸಾವಿರ ಮನೆಗಳ ಪೈಕಿ 27 ಸಾವಿರ ಮನೆ ಪೂರ್ಣ.
ಸಿರುಗುಪ್ಪ: 65 ಸಾವಿರ ಮನೆಗಳ ಪೈಕಿ 35 ಸಾವಿರ ಮನೆ ಪೂರ್ಣ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಸಹಾಯಕ ಆಯುಕ್ತ ಪಿ.ಪ್ರಮೋದ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ, ಡಿಎಂಎಫ್ ವಿಶೇಷಾಧಿಕಾರಿ ಲೋಕೇಶ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.