ಬೆಂಗಳೂರು: ವ್ಯಕ್ತಿಯೋರ್ವ ಕೋಪದ ಭರದಲ್ಲಿ ತನ್ನ ಮಗನನ್ನೇ ಗುಂಡಿಟ್ಟು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ನಡೆದಿದೆ. ಮೃತರನ್ನು ಕರೆಕಲ್ಮನೆ ನಿವಾಸಿ 32 ವರ್ಷದ ನರ್ತನ್ ಬೋಪಣ್ಣ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ವಿಷಯವೊಂದಕ್ಕೆ ನರ್ತನ್ ಮತ್ತು ಅವರ ತಂದೆ ಸುರೇಶ್ ನಡುವೆ ಜಗಳ ಉಂಟಾಗಿದೆ. ಈ ಸಂದರ್ಭದಲ್ಲಿ ಕೋಪದ ಭರದಲ್ಲಿ ತಂದೆ ಮಗನನ್ನು ಹತೈಗೆದಿದ್ದಾರೆ. ಗುಂಡಿನ ಸದ್ದು ಕೇಳಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ನರ್ತನ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದರಿಂದ ಆತ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸುರೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.