ಹಂಪಿ,ಫೆ. 03 :- ಹಂಪಿ ಉತ್ಸವದ ಅಂಗವಾಗಿ ಹೊಸಪೇಟೆ ತಾಲ್ಲೂಕಿನ ಮಲಪನಗುಡಿ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಬೃಹತ್ ಕುಸ್ತಿ ಅಖಾಡದಲ್ಲಿ ಮದಗಜಗಳಂತೆ ಸೆಣೆಸಾಡಿದ ಕುಸ್ತಿಪಟುಗಳು. ಅಂತಿಮವಾಗಿ ಬೆಳಗಾವಿಯ ಮುಸ್ಲಿಕ್ ಆಲಂ ರಾಜಾಸಾಬ್ ಹಂಪಿ ಕೇಸರಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಮುಧೋಳಿನ ಸದಾಶಿವ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮದವೇರಿದ ಮದಗಜಗಳಂತಹ ಹುಮ್ಮಸ್ಸು, ಎದುರಾಳಿಯನ್ನು ಕೆಡವಿಹಾಕುವ ಕೆಚ್ಚು, ಭುಜತಟ್ಟಿಕೊಂಡು ಕೈ ಕೈ ಮಿಲಾಯಿಸಿ ಕುಸ್ತಿಪಟುಗಳು ಪ್ರತಿಸ್ಪರ್ಧಿಗಳನ್ನು ಮಣಿಸುವ ದೃಶ್ಯ ನೋಡುಗರಲ್ಲಿ ರೋಮಾಂಚನ, ಗೆದ್ದವರಿಗೆ ಚಪ್ಪಾಳೆಯ ಮೆಚ್ಚುಗೆ… ಇವು ಶನಿವಾರ ಮಲಪನಗುಡಿ ಗ್ರಾಮದ ಬಳಿಯ ಕುಸ್ತಿ ಅಖಾಡದಲ್ಲಿ ಕಂಡು ಬಂದ ದೃಶ್ಯಗಳು.
ನೆತ್ತಿಯ ಮೇಲೆ ಸೂರ್ಯ ಆಗಮಿಸಿದ್ದರಿಂದ ಮೇಲೆ ರಣರಣ ಬಿಸಿಲು, ಅಖಾಡದಲ್ಲಿ ಕುಸ್ತಿ ಪಂದ್ಯಾಟದ ಬಿಸಿ ನೆರೆದಿದ್ದ ಸಮೂಹದವರ ಬೆವರಿಳಿಸುತ್ತಿದ್ದರೆ, ಪೈಲ್ವಾನರು ಸಹ ತಮ್ಮ ಎದುರಾಳಿಗಳ ಬೆವರಿಳಿಸುವಲ್ಲಿ ನಿರತರಾಗಿದ್ದ ದೃಶ್ಯ ಎಂಥವರನ್ನೂ ಕುತೂಹಲದಿಂದ ನಿಂತು ವೀಕ್ಷಿಸುವಂತೆ ಮಾಡಿತ್ತು.
ಹೊಸಪೇಟೆ-ಹಂಪಿಯ ದಾರಿಯಲ್ಲಿನ ಮಲಪನಗುಡಿ ಗ್ರಾಮದ ಬಳಿಯ ನಿರ್ಮಿಸಲಾಗಿರುವ ಕುಸ್ತಿ ಅಖಾಡದಲ್ಲಿ ಹಂಪಿ ಉತ್ಸವದ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಬಯಲು ಕುಸ್ತಿ ಸ್ಪರ್ಧೆಗೆ ಹೊಸಪೇಟೆ ಶಾಸಕ ಹೆಚ್.ಆರ್. ಗವಿಯಪ್ಪ ಹಾಗೂ ಜಿಲ್ಲಾಧಿಕಾರಿ ದಿವಾಕರ್ ಅವರು ಮಣ್ಣಿನ ಪೂಜೆ ನೆರವೇರಿಸುವದೊಂದಿಗೆ ಚಾಲನೆ ನೀಡಿದರು.
ಶಾಸಕ ಗವಿಯಪ್ಪ ಅವರು 86 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಸ್ಪರ್ಧಿಗಳ ನಡುವೆ ಹಸ್ತಲಾಘವ ಮಾಡಿಸಿ, ಕುಸ್ತಿಪಟುಗಳನ್ನು ಅಖಾಡಕ್ಕೆ ಧುಮಿಕಿಸಿದರು.
ಈ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಈ ಬಾರಿ ಮಹಿಳಾ ಕುಸ್ತಿಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಕೂಡ ವಿಶೇಷವಾಗಿತ್ತು.
ದಾವಣಗೆರೆಯ ಬಸವರಾಜ ಪಾಟೀಲ ಹಾಗೂ ಮರಿಯಮ್ಮನಹಳ್ಳಿಯ ಹನುಮಂತ ಅವರ ನಡುವೆ ನಡೆದ ಪ್ರಾರಂಭಿಕ ಕುಸ್ತಿ ಸ್ಪರ್ಧೆಯಲ್ಲಿ ಬಸವರಾಜ ಪಾಟೀಲ ಎದುರಾಳಿಯನ್ನು ಮಣಿಸಿ, ಗೆಲುವಿನ ನಗೆ ಬೀರಿದರು.
ಗದುಕಿನ ತೇಜಸ್ವಿನಿ ಹಾಗೂ ಗದುಗಿನ ಶ್ರೀದೇವಿ ಮಡಿವಾಳ ಹಾಗೂ ಗದುಗಿನ ತೇಜಸ್ವಿನಿ ಬಿಂಗಿ ಅವರ ನಡುವೆ ನಡೆದ ಪ್ರಾರಂಭಿಕ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ತೇಜಸ್ವಿನಿ ಅವರು ವಿಜಯ ಸಾಧಿಸಿದರು. ಈ ಬಾರಿ ಒಟ್ಟು 15 ಮಹಿಳಾ ಕುಸ್ತಿ ಕ್ರೀಡಾಪಟುಗಳು ವಿವಿಧ ವಿಭಾಗಗಳಲ್ಲಿ ಕುಸ್ತಿ ಪಂದ್ಯಗಳಲ್ಲಿ ಸೆಣೆಸಿದರು.
ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರು ಕುತೂಹಲದಿಂದ ಕುಸ್ತಿ ಪಂದ್ಯಗಳನ್ನು ವೀಕ್ಷಿಸಿಲು ಅಖಾಡದ ಬಳಿ ನೆರೆದಿದ್ದರು. ಕುಸ್ತಿ ಪೈಲ್ವಾನರು ಸೆಣೆಸಾಟದಲ್ಲಿ ತಮ್ಮ ಪಟ್ಟುಗಳನ್ನು ಹಾಕುತ್ತಿದ್ದರೆ, ಇತ್ತ ಪ್ರೇಕ್ಷಕರು ಸ್ಪರ್ಧಾಳುಗಳನ್ನು ಚಪ್ಪಾಳೆ ಹಾಗೂ ಸಿಳ್ಳು ಹಾಕುವ ಮುಖೇನ ಹುರಿದುಂಬಿಸುತ್ತಿದ್ದುದು ಕಂಡುಬಂದಿತು. ಸುಡುವ ಬಿಸಿಲನ್ನು ಲೆಕ್ಕಿಸದೆ ಕುಸ್ತಿ ಸ್ಪರ್ಧಾಳುಗಳು ಎದುರಾಳಿಗಳ ವಿರುದ್ಧ ಪಟ್ಟು ಹಾಕುವತ್ತ ಬೀಳಿಸಲು ಹಾತೊರೆಯುತ್ತಿದ್ದರು. ಒಟ್ಟಾರೆ ಕುಸ್ತಿ ಪಂದ್ಯಾವಳಿ ರೋಚಕತೆಯಿಂದ ಕೂಡಿತ್ತು.
ಕುಸ್ತಿ ಸ್ಪರ್ಧೆಯ ಫಲಿತಾಂಶ ಇಂತಿದೆ.
ಪುರುಷರ ಕುಸ್ತಿ ಸ್ಪರ್ಧೆ ಫಲಿತಾಂಶ:
ಹಂಪಿ ಕೇಸರಿ : ಮುಸ್ಲಿಕ್ ಆಲಂ ರಾಜಾಸಾಬ್- ಬೆಳಗಾವಿ.
ಹಂಪಿ ಕಂಠೀರವ : ಆದಿತ್ಯ, ಧಾರವಾಡ.
ಹಂಪಿ ಕಿಶೋರ : ಮಂಜು ಗೊರವರ, ಹರಪನಹಳ್ಳಿ.
ಹಂಪಿ ಕುಮಾರ : ಶರತ್ ಸಾದರ್, ಹರಪನಹಳ್ಳಿ.
ಮಹಿಳೆಯರ ಕುಸ್ತಿ ಸ್ಪರ್ಧೆ ಫಲಿತಾಂಶ :
ಹಂಪಿ ಕೇಸರಿ- ತೇಜಸ್ವಿನಿ ಬಿಂಗಿ, ಗದಗ.
ಹಂಪಿ ಕಂಠೀರವ- ಭುವನೇಶ್ವರಿ ಕೋಳಿವಾಡ, ಗದಗ.
ಹಂಪಿ ಕಿಶೋರಿ- ವೈಷ್ಣವಿ ಇಮ್ಮಡಿಯವರ, ಗದಗ.
ಹಂಪಿ ಕುಮಾರಿ- ಭುವನೇಶ್ವರಿ ಕೆ.ಎಸ್., ಶಿವಮೊಗ್ಗ.
ಎತ್ತಿನ ಬಂಡಿ ಗಾಲಿ ಜೋಡಣೆ ಸ್ಪರ್ಧೆ :
ಹಂಪಿ ಉತ್ಸವದ ಅಂಗವಾಗಿ ತಾಲ್ಲೂಕಿನ ಮಲಪನಗುಡಿ ಗ್ರಾಮದ ಬಳಿ ಎತ್ತಿನ ಬಂಡಿ ಗಾಲಿ ಬಿಚ್ಚಿ ಜೋಡಿಸುವ ಸ್ಪಧೆ ಏರ್ಪಡಿಸಲಾಗಿತ್ತು. ಸಂಪೂರ್ಣ ದೇಸಿ ಸೊಗಡಿನ ಕ್ರೀಡೆಯಾಗಿರುವ ಎತ್ತಿನ ಬಂಡಿ ಗಾಲಿ ಜೋಡಿಸುವ ಸ್ಪರ್ಧೆಗೆ ಇಲ್ಲಿನ ಗ್ರಾಮೀಣ ಪ್ರದೇಶದವರೇ ಉತ್ಸಾಹದಿಂದ ಪಾಲ್ಗೊಂಡಿದ್ದರು. ಕುತೂಹಲದಿಂದ ಕೂಡಿದ ಸ್ಪರ್ಧೆಯಲ್ಲಿ ಬಾಣದಕೆರೆ ಕಣಿವೆಪ್ಪ ಅತ್ಯಂತ ಕಡಿಮೆ ಸಮಯದಲ್ಲಿ ಎತ್ತಿನ ಬಂಡಿ ಗಾಲಿ ಜೋಡಿಸುವ ಮೂಲಕ ಪ್ರಥಮ ಬಹುಮಾನ ಪಡೆದುಕೊಂಡರು. ವೆಂಕೋಬ ಬಾಣದಕೆರೆ ಹಾಗೂ ಮಾರುತಿ ಮ್ಯಾಸಕೆರೆ ಅವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.
ಕಲ್ಲಿನ ಗುಂಡು ಎತ್ತುವ ಸ್ಪರ್ಧೆ :
ಗ್ರಾಮೀಣ ಭಾಗದಲ್ಲಿ ಜರುಗುವ ಅದರಲ್ಲೂ ಜಾತ್ರೆ, ಉತ್ಸವದ ಸಂದರ್ಭಗಳಲ್ಲಷ್ಟೇ ಜರುಗುವ ಕಲ್ಲಿನ ಗುಂಡು ಎತ್ತುವಂತಹ ರೋಚಕ ಸ್ಪಧೆಯನ್ನು ಈ ಬಾರಿಯ ಹಂಪಿ ಉತ್ಸವದ ಸಂಗವಾಗಿ ಮಲಪನಗುಡಿ ಗ್ರಾಮದ ಬಳಿ ಆಯೋಜಿಸಲಾಯಿತು. ನೆರೆದಿದ್ದ ಪ್ರೇಕ್ಷಕರು ಸ್ಪರ್ಧಾಳುಗಳಿಗೆ ಚಪ್ಪಾಳೆ, ಸಿಳ್ಳೆಗಳ ಮೂಲಕ ಹುರಿದುಂಬಿಸಿದರು. ಅಂತಿಮವಾಗಿ ವಿಜಯಪುರದ ಶೇಖಪ್ಪ 155 ಕೆ.ಜಿ. ಗುಂಡು ಎತ್ತುವ ಮೂಲಕ ಮೊದಲ ಬಹುಮಾನ ತಮ್ಮದಾಗಿಸಿಕೊಂಡರು. ಗಂಗಾಧರ ಮರಿಯಮ್ಮನಹಳ್ಳಿ ಹಾಗೂ ಹೊಸಪೇಟೆಯ ಸೀಗೇನಹಳ್ಳಿ ಚಂದ್ರಪ್ಪ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಬಹುಮಾನಕ್ಕೆ ಪಾತ್ರರಾದರು.