ಬೆಂಗಳೂರು (ಮಾ.4): ಮೆಟ್ರೋ ರೈಲು ಜಾಲವನ್ನು ಬೆಂಗಳೂರಿಂದ ಹೊರವಲಯಕ್ಕೆ ವಿಸ್ತರಿಸುವ ಯೋಜನೆ ಭಾಗವಾಗಿ ಮಾದಾವರದಿಂದ ತುಮಕೂರುವರೆಗೆ 52.41 ಕಿ.ಮೀ. ಉದ್ದದ ಮೆಟ್ರೋ ಮಾರ್ಗ ವಿಸ್ತರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಹೆಜ್ಜೆಯಿಟ್ಟಿದೆ. ಈ ಸಂಬಂಧ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಟೆಂಡರ್ ಕರೆಯಲಾಗಿದೆ.
ಕಳೆದ ವಾರ ನಿಗಮ ಚಲ್ಲಘಟ್ಟ-ಬಿಡದಿ ಹಾಗೂ ಗೊಟ್ಟಿಗೆರೆ-ಕಾಡುಗೋಡಿ ಟ್ರೀ ಪಾರ್ಕ್ವರೆಗೆ ಮೆಟ್ರೋ ಮಾರ್ಗಕ್ಕಾಗಿ (118 ಕಿ.ಮೀ.) ಎರಡು ಹಂತದಲ್ಲಿ ಕಾರ್ಯ ಸಾಧ್ಯತೆಯನ್ನು ಅಧ್ಯಯನ ಮಾಡಲು ಬಿಡ್ಗಳನ್ನು ಆಹ್ವಾನಿಸಿತ್ತು. ಇದೀಗ ಹಸಿರು ಮಾರ್ಗವನ್ನು ನಗರದಾಚೆಗೆ ವಿಸ್ತರಿಸಲು ಮುಂದಾಗಿದೆ. ಸರ್ಕಾರಿ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿನ ಟೆಂಡರ್ಗೆ ಬಿಡ್ಗಳನ್ನು ಸಲ್ಲಿಸಲು ಏ.2 ಕೊನೆಯ ದಿನವಾಗಿದೆ.
ಕಳೆದ ವರ್ಷದ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಮಾರ್ಗ ಘೋಷಿಸಿದ್ದರು. ಇದೀಗ ತುಮಕೂರುವರೆಗೆ ಮೆಟ್ರೋ ಮಾರ್ಗಕ್ಕೆ ಟೆಂಡರ್ ಕರೆಯಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಮೆಟ್ರೋ ವಿಸ್ತರಿಸಲು ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ ಶೀಘ್ರವೇ ಬಿಡ್ ಆಹ್ವಾನಿಸಲಾಗುವುದು ಎಂದು ನಮ್ಮ ಮೆಟ್ರೋದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಮಾದಾವರದಿಂದ ಕುಣಿಗಲ್ ಕ್ರಾಸ್ವರೆಗೆ 11 ಕಿ.ಮೀ. ದೂರದವರೆಗೆ ಹಸಿರು ಮಾರ್ಗವನ್ನು ವಿಸ್ತರಿಸಲು ಸರ್ಕಾರ ಯೋಜಿಸಿತ್ತು. ಆದರೆ, ಗೃಹ ಸಚಿವ ಜಿ.ಪರಮೇಶ್ವರ್ ಅವರು ತವರು ಜಿಲ್ಲೆ ತುಮಕೂರಿಗೆ ಮೆಟ್ರೋ ಸೇವೆ ವಿಸ್ತರಿಸುವುದಾಗಿ ಹೇಳಿದ್ದರು. ತುಮಕೂರಿಗೆ ಮೆಟ್ರೋ ವಿಸ್ತರಿಸುವುದರಿಂದ ಬೆಂಗಳೂರಿನ ಮೇಲಿನ ಹೊರೆ ಕಡಿಮೆಯಾಗುತ್ತದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ 48ರ ಉದ್ದಕ್ಕೂ ಮೆಟ್ರೋ ಮಾರ್ಗ ನಿರ್ಮಿಸಬಹುದು ಎಂದು ಅವರು ಹೇಳಿದ್ದರು.
ಕಾರ್ಯಸಾಧ್ಯತೆಯ ಅಧ್ಯಯನದ ಆಧಾರದ ಮೇಲೆ ಸರ್ಕಾರ ಹೊಸ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಕೊಡುತ್ತದೆ ಅಥವಾ ಯೋಜನೆ ತಿರಸ್ಕರಿಸಲಿದೆ. ಜೊತೆಗೆ ಇದರ ಆಧಾರದಲ್ಲಿಯೇ ಬಿಎಂಆರ್ಸಿಎಲ್ ವಿಸ್ತ್ರತ ಯೋಜನಾ ವರದಿ (ಡಿಪಿಆರ್) ರೂಪಿಸಿಕೊಳ್ಳಲಿದೆ. ನಾಲ್ಕೈದು ತಿಂಗಳಲ್ಲಿ ಕಾರ್ಯಸಾಧ್ಯತಾ ವರದಿ ಸಂಸ್ಥೆಗೆ ಸಿಗಲಿದೆ. ಈ ವಿಸ್ತ್ರತ ಮೆಟ್ರೋ ಮಾರ್ಗ ಕನಿಷ್ಠ ಐದು ವರ್ಷಗಳ ಅವಧಿಯ ನಿರ್ಮಾಣ ಆಗಬಹುದು ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಮಾದಾವಾರಕ್ಕೆ ಮೆಟ್ರೋ ಲೋಕಸಭೆ ಬಳಿಕ ಚಾಲನೆ: ತುಮಕೂರು ರಸ್ತೆಯಲ್ಲಿ ಕಳೆದ ಆರು ವರ್ಷದಿಂದ ಕುಂಟುತ್ತ ಸಾಗಿರುವ ಮೆಟ್ರೋ ಹಸಿರು ಮಾರ್ಗದ ನಾಗಸಂದ್ರ-ಮಾದವಾರ (ಬಿಐಇಸಿ) 3.7 ಕಿ.ಮೀ. ಮೆಟ್ರೋ ಲೋಕಸಭಾ ಚುನಾವಣೆ ಬಳಿಕವೇ ಉದ್ಘಾಟನೆ ಆಗುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮಂಜುನಾಥ ನಗರ, ಚಿಕ್ಕಬಿದರಕಲ್ಲು ನಿಲ್ದಾಣದ ಕಾಮಗಾರಿ ಮುಗಿದಿದ್ದು, ಮಾದಾವರ ನಿಲ್ದಾಣದ ಸಿವಿಲ್ ಕಾಮಗಾರಿ ಕೊನೆ ಹಂತದಲ್ಲಿದೆ. ಹಳಿ ಅಳವಡಿಕೆ, ಸಿಗ್ನಲಿಂಗ್, ಪ್ರಾಯೋಗಿಕ ಚಾಲನೆ ಬಳಿಕ ಸಿಎಂಆರ್ಎಸ್ ಪರೀಕ್ಷೆ ಆಗಬೇಕಿದೆ. ಇದು ಪೂರ್ಣಗೊಂಡರೂ ಮೆಟ್ರೋ ರೈಲುಗಳ ಕೊರತೆ ಇರುವುದರಿಂದ ತಕ್ಷಣ ಈ ಮಾರ್ಗ ಜನಸಂಚಾರಕ್ಕೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ. ತೀತಾಘರ್ ರೈಲ್ ಫ್ಯಾಕ್ಟರಿಯಿಂದ ರೈಲುಗಳು ಬಂದ ಬಳಿಕವಷ್ಟೇ ಈ ಮಾರ್ಗ ಉದ್ಘಾಟನೆ ಆಗುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.