ನಾಸಿಕ್ ಜ. 25: ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳ ಪೈಕಿ 23ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಮ್ಮ ಪಕ್ಷ ದೃಢವಾಗಿದೆ ಎಂದು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಬುಧವಾರ ಪುನರುಚ್ಚರಿಸಿದ್ದಾರೆ. ಈ ಮೂಲಕ I.N.D.I.A’ ಮೈತ್ರಿಕೂಟದಲ್ಲಿ ಮತ್ತಷ್ಟು ಅಪಸ್ವರ ಕೇಳಿಬಂದಿದೆ.
ಇವರಿಗೆ 23 ಸೀಟು ಬಿಟ್ಟುಕೊಟ್ಟರೆ, ಕಾಂಗ್ರೆಸ್ ಮತ್ತು NCP (ಶರದ್ ಪವಾರ್) ನಲ್ಲಿ ಸೇನೆಯ (UBT) ಮಹಾ ವಿಕಾಸ್ ಅಘಾಡಿ (MVA) ಇತರ ಪಾಲುದಾರರಿಗೆ ಕೇವಲ 25 ಸ್ಥಾನಗಳು ಮಾತ್ರ ಉಳಿಯಲಿದೆ. ಇನ್ನು, ಈ ಸಂಬಂಧ ಮಾತನಾಡಿದ ಸಂಜಯ್ ರಾವುತ್, ಈ ಕ್ಷೇತ್ರಗಳಲ್ಲಿ ತಮ್ಮ ಸಾಮರ್ಥ್ಯ ಮತ್ತು ತಮ್ಮ ಅಭ್ಯರ್ಥಿಗಳ ಗೆಲುವಿನ ಮೇಲೆ ಆಧಾರಿತವಾಗಿದೆ ಎಂದಿದ್ದಾರೆ. ಎಂವಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಮಾತುಕತೆ ಗುರುವಾರ ಮುಂಬೈನಲ್ಲಿ ನಡೆಯಲಿದೆ ಎಂದೂ ಅವರು ಹೇಳಿದ್ದಾರೆ. ಹಾಗೆ, ವಂಚಿತ್ ಬಹುಜನ ಅಘಾಡಿ ಪಕ್ಷವನ್ನು ಎಂವಿಎಗೆ ಸೇರಿಸುವ ಬಗ್ಗೆಯೂ ಚರ್ಚಿಸಲಾಗುವುದು ಮತ್ತು ಗುರುವಾರದ ಸಭೆಗೆ ಈ ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರನ್ನು ಆಹ್ವಾನಿಸಲಾಗಿದೆ ಎಂದೂ ಹೇಳಿದರು. ಬಳಿಕ ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತಿರುವುದಕ್ಕೆ ಎನ್ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಂಜಯ್ ರಾವುತ್, ಕೇಸರಿ ಪಕ್ಷದ ವಿರುದ್ಧ ಹೋರಾಡುತ್ತಿರುವ ವಿರೋಧ ಪಕ್ಷದ ನಾಯಕರ ವಿರುದ್ಧ ಬಿಜೆಪಿ ಇಡಿಯಂತಹ ಸರ್ಕಾರಿ ಯಂತ್ರವನ್ನು ಬಳಸುತ್ತಿದೆ. ಎನ್ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ವಿರುದ್ಧ ಇಡಿ ತನಿಖೆ ಮತ್ತು ಇತರ ವಿರೋಧ ಪಕ್ಷದ ನಾಯಕರ ಮೇಲಿನ ತನಿಖೆ ಇದರ ಭಾಗವಾಗಿದೆ ಎಂದೂ ಕಿಡಿ ಕಾರಿದ್ದಾರೆ.
ಹಾಗೂ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಮತ್ತು 40 ಶಾಸಕರು ತಮ್ಮ ವಿರುದ್ಧ ಇಡಿ ಕ್ರಮದ ಭಯದಿಂದ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದೂ ಉದ್ಧವ್ ಠಾಕ್ರೆ ಬಣದ ಸೇನೆಯ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.