ಕಲಬುರಗಿ, ಜ. 27: ಇಂಡಿಯಾ ಮೈತ್ರಿಕೂಟ ಒಟ್ಟಾಗಿರಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾತನಾಡಿದ ಅವರು, ಮೈತ್ರಿಕೂಟವು ಒಗ್ಗಟ್ಟು ಕಾಯ್ದುಕೊಳ್ಳುವ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲರಿಗೂ ಪತ್ರ ಬರೆದಿದ್ದೇನೆ. ಹೀಗಾಗಿ ಇನ್ನು ಆ ವಿಚಾರದ ಬಗ್ಗೆ ಈಗ ಹೇಳಿಕೆ ಕೊಟ್ಟರೆ ಗೊಂದಲ ಆಗುತ್ತದೆ ಎಂದರು.
ಭಾನುವಾರ ಡೆಹ್ರಾಡೂನ್ಗೆ ಹೋಗಿ ಮಾಹಿತಿ ಪಡೆದುಕೊಂಡು ನಂತರ ಮಾತನಾಡುತ್ತೇನೆ. ಇಂಡಿಯಾ ಒಕ್ಕೂಟದಿಂದ ಎಲ್ಲರೂ ಸ್ಪರ್ಧೆ ಮಾಡಿದರೆ ಒಳ್ಳೆಯದಾಗಲಿದೆ ಎಂದು ಅವರು ಹೇಳಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡುವ ಬಗ್ಗೆ ಮಾಹಿತಿಯಿಲ್ಲ. ಅವರು ರಾಜ್ಯಪಾಲರನ್ನು ಭೇಟಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಪ್ರಜಾಪ್ರಭುತ್ವ ಉಳಿಯಬೇಕಾದರೆ ನಾವು ಒಗ್ಗಟ್ಟಾಗಿರಬೇಕು. ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರಿದಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಜೆಡಿಯು ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿರುವ ಮತ್ತು ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಏಕಾಂಗಿಯಾಗಿ ಲೋಕಸಭೆ ಚುನಾವಣೆ ಎದುರಿಸಲಿದೆ ಎಂಬ ಮಮತಾ ಹೇಳಿಕೆಗಳ ಬೆನ್ನಲ್ಲೇ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
ಬಂಗಾಳದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಅವರು ಹಲವಾರು ಕಾರ್ಯಕ್ರಮಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಕೆಲವು ನಿಮಿಷಗಳಾದರೂ ರಾಹುಲ್ ಪರವಾಗಿ ನಿಲ್ಲುವಂತೆ ಮಮತಾ ಅವರಿಗೆ ಕಾಂಗ್ರೆಸ್ ಮನವಿ ಮಾಡಿದೆ. ಈ ವಿಚಾರವಾಗಿ ಮಮತಾ ಜತೆ ಖರ್ಗೆ ಚರ್ಚಿಸಿದ್ದಾರೆ ಎಂದು ಜೈರಾಂ ರಮೇಶ್ ಶುಕ್ರವಾರ ತಿಳಿಸಿದ್ದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇಂಡಿಯಾ ಮೈತ್ರಿಕೂಟದ ನಾಯಕರಲ್ಲಿ ಬಿರುಕು ಮೂಡುತ್ತಿರುವುದು ಕಾಂಗ್ರೆಸ್ಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವುದಕ್ಕಾಗಿ ರಚನೆಯಾಗಿರುವ ಮೈತ್ರಿಕೂಟದಲ್ಲೇ ಇದೀಗ ಅಪಸ್ವರಗಳು ಹೆಚ್ಚಾಗಿರುವುದು ಇತ್ತೀಚಿನ ಬೆಳವಣಿಗೆಗಳಿಂದ ಕಂಡುಬರುತ್ತಿದೆ. ಇದನ್ನು ಸರಿಪಡಿಸುವ ಹೊಣೆಗಾರಿಕೆ ಇದೀಗ ಖರ್ಗೆ ಮೇಲಿದ್ದು, ಆ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಿದ್ದಾರೆ ಎನ್ನಲಾಗುತ್ತಿದೆ.