ಬಳ್ಳಾರಿ,ಏ.04 : ನರೇಗಾ ಯೋಜನೆಯು ಕೂಲಿ ಕಾರ್ಮಿಕರಿಗೆ ವರದಾನವಾಗಿದ್ದು, ಒಂದು ಆರ್ಥಿಕ ವರ್ಷದಲ್ಲಿ 100 ದಿನಗಳ ಕೆಲಸ ಕೊಡಲಾಗುವುದು. ಯಾರೂ ಕೆಲಸಕ್ಕೆ ಗುಳೆ ಹೋಗದೇ, ನಿಮ್ಮ ಊರಿನಲ್ಲೇ ಕೆಲಸ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ತಿಳಿಸಿದರು.
ಅವರು ಇಂದು, ಸಿರುಗುಪ್ಪ ತಾಲ್ಲೂಕಿನ ಕೆ.ಸೂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದೇನೂರು ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡುತ್ತಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಮತದಾನ ಕುರಿತು ಜಾಗೃತಿ ಮೂಡಿಸಿ ಮಾತನಾಡಿದರು.
ನರೇಗಾ ಯೋಜನೆಯಡಿ ವೈಯಕ್ತಿಕ ಹಾಗೂ ಸಾಮೂಹಿಕ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದ್ದು, ಆರ್ಥಿಕ ವರ್ಷದಲ್ಲಿ ಕೂಲಿ ಮೊತ್ತ ರೂ.349 ಹೆಚ್ಚಳವಾಗಿದೆ. ಈ ಹಿನ್ನಲೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಲಾಗುವುದು ಎಂದರು.
ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ, ಆದಷ್ಟು ಬೇಗ ಕಾಮಗಾರಿ ಸ್ಥಳಕ್ಕೆ ಬಂದು, ಕೆಲಸ ನಿರ್ವಹಿಸಿದ ನಂತರ ಮನೆಗೆ ತೆರಳಬೇಕು. ಹಿರಿಯ ನಾಗರಿಕರಿಗೆ ಹಾಗೂ ವಿಶೇಷ ಚೇತನರಿಗೆ ಕೆಲಸದ ಪ್ರಮಾಣದಲ್ಲಿ ಶೇ.50 ರಿಯಾಯಿತಿ ಇದ್ದು, ಅವರಿಗೂ ಪೂರ್ಣ ಪ್ರಮಾಣದ ಕೂಲಿ ನೀಡಲಾಗುವುದು ಎಂದು ತಿಳಿಸಿದರು.
ಚಿಕ್ಕ ಮಕ್ಕಳಿರುವ ತಾಯಂದಿರು, ತಮ್ಮ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಟ್ಟು ಬರಬಹುದು. ಕೂಸಿನ ಮನೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ, ಜಾನಪದ ಗೀತೆಗಳು, ಆಟದ ವ್ಯವಸ್ಥೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಹಾಗೂ ಮಕ್ಕಳ ಲಾಲನೆ-ಪಾಲನೆಯನ್ನು ಮಾಡಲು, ಮಕ್ಕಳ ಆರೈಕೆದಾರರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.
*ತಪ್ಪದೇ ಮತದಾನ ಮಾಡಿ:*
ಪ್ರಜಾಪ್ರಭುತ್ವ ದೇಶದ ಅತಿ ದೊಡ್ಡ ಹಬ್ಬವೆಂದರೆ ಅದು ಚುನಾವಣೆ. ಪ್ರಸ್ತುತ ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಮೇ 07 ರಂದು ಮತದಾನ ನಡೆಯಲಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿಯೂ ಆದ ರಾಹುಲ್ ಶರಣಪ್ಪ ಸಂಕನೂರ ಅವರು ಕರೆ ನೀಡಿದರು.
ಮತದಾನ ಒಂದು ಶಕ್ತಿ ಇದ್ದಂತೆ. ನಿಮ್ಮ ಶಕ್ತಿಯನ್ನು ಅಭ್ಯರ್ಥಿಗಳ ಉಡುಗೊರೆ, ಆಸೆ-ಆಮೀಷಗಳಿಗೆ ಮಾರಿಕೊಳ್ಳಬಾರದು. ನಿರ್ಭೀತರಾಗಿ ಮತ ಚಲಾಯಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ವೇಳೆ ಸಿರುಗುಪ್ಪ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪವನ್ಕುಮಾರ್ ಎಸ್.ದಂಡಪ್ಪನವರ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮನೋಹರ್, ತಾಲೂಕು ಐ.ಇ.ಸಿ ಸಂಯೋಜಕ ಸುರೇಶ್, ತಾಂತ್ರಿಕ ಸಂಯೋಜಕ ಪ್ರದೀಪ್, ತಾಂತ್ರಿಕ ಸಹಾಯಕ ಶೇಕ್ಷಾವಲಿ, ಬಿ.ಎಫ್.ಟಿ ಯೋಗಪ್ಪ, ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರಾಜೇಗೌಡ, ಗ್ರಾಮ ಕಾಯಕ ಮಿತ್ರ ಗಂಗಮ್ಮ ಸೇರಿದಂತೆ ಸಿಬ್ಬಂದಿಗಳು ಮತ್ತು 258 ಜನ ಕೂಲಿ ಕಾರ್ಮಿಕರು ಹಾಜರಿದ್ದರು.