ಮಲಪ್ಪುರಂ: ಉತ್ತರ ಕೇರಳ ಜಿಲ್ಲೆಯ ಕುಟ್ಟಿಪ್ಪುರಂನಲ್ಲಿ ಕಳೆದ ಐದು ದಿನಗಳಿಂದ ತಿನ್ನಲು ಏನೂ ಸಿಗದೇ ಹಸಿವಿನಿಂದ ಕಂಗೆಟ್ಟಿದ್ದ ಅಸ್ಸಾಂ ಮೂಲದ ವ್ಯಕ್ತಿಯೊಬ್ಬ ಬೆಕ್ಕಿನ ಹಸಿ ಮಾಂಸವನ್ನು ಸೇವಿಸುತ್ತಿದ್ದ ಆಘಾತಕಾರಿ ಘಟನೆ ಶನಿವಾರ ನಡೆದಿದೆ.
ಇಲ್ಲಿನ ಜನನಿಬಿಡ ಬಸ್ ನಿಲ್ದಾಣದ ಆವರಣದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಅಸ್ಸಾಂನ ಧುಬ್ರಿ ಜಿಲ್ಲೆಯ 27 ವರ್ಷದ ವ್ಯಕ್ತಿ ಬೆಕ್ಕಿನ ಹಸಿ ಮಾಂಸ ತಿನ್ನುತ್ತಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಲ್ದಾಣದ ಮೆಟ್ಟಿಲುಗಳ ಮೇಲೆ ಕುಳಿತು ಸತ್ತ ಬೆಕ್ಕಿನ ಹಸಿ ಮಾಂಸವನ್ನು ತಿನ್ನುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
“ಮಾಹಿತಿ ಸಿಕ್ಕ ನಂತರ ನಾವು ಸ್ಥಳಕ್ಕೆ ಭೇಟಿ ನೀಡಿ, ಆ ವ್ಯಕ್ತಿಯನ್ನು ವಿಚಾರಿಸಿದಾಗ, ಕಳೆದ ಐದು ದಿನಗಳಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ. ಹೀಗಾಗಿ ಹಸಿವು ತಾಳದೇ ಬೆಕ್ಕಿನ ಮಾಂಸ ತಿಂದಿರುವುದಾಗಿ ಹೇಳಿದ್ದಾನೆ” ಎಂದು ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಪೊಲೀಸರು, ಅಲ್ಲಿಯೇ ಆ ವ್ಯಕ್ತಿಗೆ ಊಟ ಕೊಡಿಸಿದ್ದಾರೆ ಮತ್ತು ಅದನ್ನು ಯಾವುದೇ ಹಿಂಜರಿಕೆಯಿಲ್ಲದೆ ಸ್ವೀಕರಿಸಿದ್ದಾನೆ. ಬಳಿಕ ಆ ವ್ಯಕ್ತಿ ಬಗ್ಗೆ ವಿಚಾರಿಸಿದಾಗ, ಆತ ಅಸ್ಸೋಂನ ಧುಬ್ರಿ ಜಿಲ್ಲೆಯವನು ಅನ್ನೋದು ತಿಳಿದುಬಂದಿದೆ. ತಾನು ಕಾಲೇಜು ವಿದ್ಯಾರ್ಥಿಯಾಗಿದ್ದು, ಕಳೆದ ಡಿಸೆಂಬರ್ನಲ್ಲಿಯೇ ಇಲ್ಲಿಗೆ ಬಂದಿದ್ದೇನೆ. ಈ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿಲ್ಲ. ಹೇಳದೇ ಕೇಳದೆ ರೈಲು ಹತ್ತಿ ಕೇರಳ ತಲುಪಿದೆ ಎಂದು ಮಾಹಿತಿ ನೀಡಿದ್ದಾನೆ.
ಚೆನ್ನೈನಲ್ಲಿ ತನ್ನ ಬಂಧುಗಳು ಇದ್ದಾರೆ ಎಂದು ಯುವಕ ತಿಳಿಸಿದ್ದಾನೆ. ಅವರ ಮೊಬೈಲ್ ಸಂಖ್ಯೆ ಪಡೆದು ಸಂಪರ್ಕಿಸಲಾಗಿದೆ. ನಡೆದ ಘಟನೆಯ ಬಗ್ಗೆ ಅವರಿಗೂ ಮಾಹಿತಿ ನೀಡಲಾಗಿದೆ. ಈತನ ಸಂಬಂಧಿಕರು ಬಂದ ಬಳಿಕ ಅವರಿಗೆ ಯುವಕನನ್ನು ಒಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದರು.