ಬಳ್ಳಾರಿ,ಏ.16 : ತಾಲ್ಲೂಕಿನ ಸಂಗನಕಲ್ಲಿನ ಸಣ್ಣ ರಾಚಮ್ಮ ಗುಡ್ಡದಲ್ಲಿರುವ ಶಿಲಾಯುಗದ ರೇಖಾಚಿತ್ರಗಳ ಹತ್ತಿರದಲ್ಲಿನ ಬಂಡೆಯನ್ನು ಯಾರೋ ದುಷ್ಕರ್ಮಿಗಳು ಕತ್ತರಿಸಿ ತೆಗೆದುಕೊಂಡು ಹೋಗಿದ್ದು, ಈ ಕುರಿತು ಬಳ್ಳಾರಿಯ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗನಕಲ್ಲಿನ ಪ್ರಾಗೈತಿಹಾಸಿಕ ಕಾಲದ ಗುಡದಲ್ಲಿ ಶಿಲಾಯುಗದ ರೇಖಾಚಿತ್ರಗಳು ಹಾಗೂ ಗೀರು ಚಿತ್ರಗಳನ್ನು ಹೊಂದಿದ್ದು, ರಾಜ್ಯ ಸರ್ಕಾರದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ. ಈ ಸ್ಮಾರಕದ ಸಣ್ಣ ರಾಚಮ್ಮ ಗುಡ್ಡದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಯಂತ್ರವನ್ನು ಬಳಸಿ ಕಲ್ಲನ್ನು ಕೊರೆದು ತೆಗೆದುಕೊಂಡು ಹೋಗಿದ್ದು, ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಲಕೇರಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಶೇಜೇಶ್ವರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961ರನ್ವಯ ಸೆಕ್ಸೆನ್ 26 ಉಪ(1)ರನ್ವಯ ಸಂರಕ್ಷಿತ ಸ್ಮಾರಕವನ್ನು ನಾಶಪಡಿಸುವ, ತೆಗೆದುಹಾಕುವ, ಹಾನಿಗೊಳಿಸುವ, ವಿರೂಪಗೊಳಿಸುವ, ಸ್ಥಾನಪಲ್ಲಟಗೊಳಿಸುವ ಮುಂತಾದ ದುಷ್ಕøತ್ಯವನ್ನು ಮಾಡಿದಲ್ಲಿ ಯಾರೇ ಆಗಲಿ ಮೂರು ತಿಂಗಳುಗಳ ಕಾರಾಗೃಹ ವಾಸ ಮತ್ತು ಎರಡು ಸಾವಿರ ದಂಡ ವಿಧಿಸಬಹುದಾಗಿರುವುದರ ಅಡಿಯಲ್ಲಿ ಸೋಮವಾರ ಬಳ್ಳಾರಿಯ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದಾರೆ.
ದಿ ಕರ್ನಾಟಕ ಏನ್ಷಿಯೆಂಟ್ ಅಂಡ್ ಹಿಸ್ಟಾರಿಕಲ್ ಮಾನುಮೆಂಟ್ಸ್ ಅಂಡ್ ಆರ್ಕಾಲಾಜಿಕಲ್ ಸೈಟ್ ಅಂಡ್ ರಿಮೇನ್ಸ್ ಆಕ್ಟ್ 1961 ಮತ್ತು ಅದರ ಅಡಿಯಲ್ಲಿನ ನಿಯಮ 12ರ ಅನ್ವಯ ಸ್ಮಾರಕಗಳ ಹತ್ತಿರದ ಅಥವಾ ಅದಕ್ಕೆ ಹೊಂದಿಕೊಂಡಿರುವ 100 ಮೀಟರ್ ಮತ್ತು ನಂತರದ 200 ಮೀಟರ್ಗಳ ಅಂತರದಲ್ಲಿನ ಪ್ರದೇಶವನ್ನು ಗಣಿ ಕಾರ್ಯಾಚರಣೆ ಹಾಗೂ ಇತರೆ ನಿರ್ಮಾಣದ ಉದ್ದೇಶಗಳಿಗಾಗಿ ಅನುಕ್ರಮವಾಗಿ ನಿಷೇಧಿತ ಮತ್ತು ರಕ್ಷಿತ ಪ್ರದೇಶವೆಂದು ಘೋಷಿಸಿದೆ.
ಆದ್ದರಿಂದ ರಾಜ್ಯ ಸಂರಕ್ಷಿತ ಸ್ಮಾರಕಗಳ ಹತ್ತಿರ ಯಾವುದೇ ಗಣಿಗಾರಿಕೆ, ಕಾಮಗಾರಿ, ಸ್ಮಾರಕಗಳಿಗೆ ಧಕ್ಕೆ ಉಂಟು ಮಾಡುವಂತಹ, ವಿರೂಪಗೊಳಿಸುವಂತಹ, ಕಾರ್ಯಚಟುವಟಿಕೆ ಕೈಗೊಂಡಲ್ಲಿ ಯಾರೇ ಆಗಲಿ ಅವರ ವಿರುದ್ಧ ನಿಯಮಾವಳಿ ಅನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಡಾ.ಆರ್.ಶೇಜೇಶ್ವರ ಅವರು ತಿಳಿಸಿದ್ದಾರೆ.