ಬಳ್ಳಾರಿ, ಜು.೧೬: ಆಂದ್ರಾಳ್ ಬಳಿಯ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸುತ್ತಿರುವ ಸೇತುವೆಯ ಕಾಮಗಾರಿ ನನೆಗುದಿಗೆ ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿದೆ. ಇದರಿಂದ ಐದಾರು ದಿನಗಳಿಂದ ಬಳ್ಳಾರಿ ನಗರದಿಂದ ಆಂಧ್ರಳ, ಬೊಬ್ಬಕುಂಟಾ ಮತ್ತಿತರ ಗ್ರಾಮಗಳಿಗೆ ಸಂಚಾರ ಸ್ಥಗಿತಗೊಂಡಿತ್ತು. ಇದೇ ಸೇತುವೆ ಮೂಲಕ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಕುಸಿದು ಬಿದ್ದಿರುವುದರಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ.
ಆದರೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾಗಲಿ ಇದುವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಗ್ರಹ ವ್ಯಕ್ತಪಡಿಸಿದ್ದಾರೆ. ಆಂಧ್ರಾಲ್ ನಗರ ಕ್ಷೇತ್ರ ವ್ಯಾಪ್ತಿಯ ೮ನೇ ವಿಭಾಗಕ್ಕೆ ಸೇರ್ಪಡೆಯಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ.
ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಕೈಗೊಂಡ ಕಾಮಗಾರಿ ವರ್ಷಗಳು ಕಳೆದರೂ ಪೂರ್ತಿಯಾಗಿಲ್ಲ. ಇದರ ಬಗ್ಗೆ ಗಮನಹರಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ನಗರದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ೨೦೨೨ ರಲ್ಲಿ ಆಡಳಿತ ಪಕ್ಷಕ್ಕೆ ಸೇರಿದ ಶಾಸಕರಿರುವ ಕ್ಷೇತ್ರಗಳಿಗೆ ಅನುಬಂಧ ಇ ೫೦೫೪ ರ ಅಡಿಯಲ್ಲಿ ಬಳ್ಳಾರಿ ನಗರದ ಅಭಿವೃದ್ಧಿಗೆ ಸುಮಾರು ೫೦ ಕೋಟಿ ರೂ. ಮಂಜೂರು ಮಾಡಲಾಗಿತ್ತು. ಬಿಡುಗಡೆಯಾದ ೫೦ ಕೋಟಿ ರೂ., ಲೋಕೋಪಯೋಗಿ ಇಲಾಖೆ ಆಶ್ರಯದಲ್ಲಿ ನಗರದ ಹಲವೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ಅ|ಂದಿನ ಶಾಸಕರಾದ ಜಿ.ಸೋಮಶೇಖರರೆಡ್ಡಿ ಚಾಲನೆ ನೀಡಿದ್ದರು. ಶಾಸಕರು ಹಾಗೂ ಅಧಿಕಾರಿಗಳ ವಿಶ್ವಾಸದಿಂದ ಗುತ್ತಿಗೆದಾರರು ಬಿಲ್ಗಳಿಗಾಗಿ ಕಾಯುತ್ತಿರುವಾಗಲೇ ರಾಜ್ಯದಲ್ಲಿ ಸರ್ಕಾರ ಬದಲಾಯಿತು. ಇದರಿಂದ ಕೋಟಿಗಟ್ಟಲೆ ಖರ್ಚು ಮಾಡಿ ಆಗಿನ ಶಾಸಕರ ಮೇಲೆ ನಂಬಿಕೆ ಇಟ್ಟು ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಇದುವರೆಗೂ ಹಣ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇತುವೆ ನಿರ್ಮಾಣದ ಸಮಯದಲ್ಲಿ ನಿರ್ಮಿಸಲಾದ ತಾತ್ಕಾಲಿಕ ರಸ್ತೆ ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿಹೋಗಿದ್ದು, ನಗರದ ಇತರ ಭಾಗದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ನಗರಕ್ಕೆ ಬರಲು ಹೆಚ್ಚುವರಿಯಾಗಿ ೧೦ ಕಿಲೋಮೀಟರ್ ಪ್ರಯಾಣಿಸಬೇಕಾಗಿದೆ ಎನ್ನುತ್ತಾರೆ ಆಯಾ ಗ್ರಾಮಗಳ ಜನರು. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕ ನಾರಾ ಭರತ್ ರೆಡ್ಡಿ ಅವರು ಮುತುವರ್ಜಿ ವಹಿಸಿ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮಕೈಗೊಳ್ಳಬೇಕ ಎಂಬುದು ಸ್ಥಳೀಯ ಜನರ ಆಗ್ರಹವಾಗಿದೆ.
ಆಂದ್ರಾಳ್ ಗ್ರಾಮಕ್ಕೆ ಸಂಪರ್ಕಿಸುವ ತಾತ್ಕಾಲಿಕ ರಸ್ತೆ ಇತ್ತೀಚೆಗೆ ಸುರಿದ ಮಳೆಗೆ ಕೊಚ್ಚಿಹೋದ ವಿಷಯದ ಬಗ್ಗೆ ಕಾರ್ಪೊರೇಟರ್ ರಾಮಾಂಜನೇಯಲು ಸುವರ್ಣವಾಹಿನಿ ಪತ್ರಿಕೆಯ ಜೊತೆ ಮಾತನಾಡಿ, ಕಾಮಗಾರಿಯನ್ನು ಶೀಘ್ರ ಗತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು. ಅದೇ ರೀತಿ ತಾತ್ಕಾಲಿಕ ರಸ್ತೆಯನ್ನು ಅಭಿವೃದ್ದಿ ಪಡಿಸಿ, ಕುಡಿಯುವ ನೀರು ಪೂರೈಸುವ ಪೈಪ್ಲೈನ್ ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.