ಹಾವೇರಿ, ಮಾರ್ಚ್ 11: ಒಣ ಮೆಣಸಿನಕಾಯಿ ಬೆಲೆ ದಿಢೀರ್ ಕುಸಿತ ಹಿನ್ನೆಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ರೈತರಿಂದ ಕಲ್ಲುತೂರಾಟ ಮಾಡಿರುವಂತಹ ಘಟನೆ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ದರ ದಿಢೀರ್ ಇಳಿಕೆಯಿಂದ ಆಕ್ರೋಶಗೊಂಡಿರುವ ರೈತರು ರೊಚ್ಚಿಗೆದ್ದು ಮೆಣಸಿನಕಾಯಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಮಾರ್ಕೆಟ್ನಲ್ಲಿ ದಟ್ಟಹೊಗೆಯಿಂದ ಸಾರ್ವಜನಿಕರ ಉಸಿರಾಟಕ್ಕೆ ಸಮಸ್ಯೆ ಉಂಟಾಗಿದೆ. ಇಷ್ಟೇ ಅಲ್ಲದೆ ಕಾರಿಗೆ ಬೆಂಕಿ ಹಚ್ಚಿ, ಕಚೇರಿ ಮೇಲೆ ಕಲ್ಲು ತೂರಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಕಳೆದ ವಾರ ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ವಿತ್ತು. ಈಗ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 12 ಸಾವಿರ ರೂ. ಕುಸಿತ ಹಿನ್ನೆಲೆ ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದುವರೆಗೆ 12 ವಾಹನ ಸುಟ್ಟು ಹಾಕಿದ್ದಾರೆ. 1 ಅಗ್ನಿಶಾಮಕ ವಾಹನ ಸಹ ಬೆಂಕಿಗೆ ಆಹುತ್ತಿ ಆಗಿದೆ. ಒಟ್ಟು 3 ಅಗ್ನಿಶಾಮಕ ವಾಹನ ಸ್ಥಳದಲ್ಲಿ ಇದೆ. APMC ಖಡತ ಎಲ್ಲಾ ಬೆಂಕಿಗೆ ಆಹುತಿಯಾಗಿವೆ. ಸ್ಥಳದಿಂದ ಹೊಗಲು ರೈತರು ಪಟ್ಟುಬಿಡುತ್ತಿಲ್ಲ.
ಈ ವಿಚಾರವಾಗಿ ವಿಧಾನಸೌಧದಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಬೆಲೆ ಕುಸಿತ ಹಿನ್ನೆಲೆಯಲ್ಲಿ ಬ್ಯಾಡಗಿ ಎಪಿಎಂಸಿಯಲ್ಲಿ ಗಲಾಟೆ ಆಗಿದೆ. 20 ಸಾವಿರದಿಂದ 8 ಸಾವಿರ ರೂ. ಮೆಣಸಿನಕಾಯಿ ಬೆಲೆ ಕುಸಿತ ಕಂಡಿದೆ. ಇದು ಒಂದೇ ಎಪಿಎಂಸಿಯಲ್ಲಿ ಆಗಿದೆಯೋ ಅಥವಾ ಬೇರೆ ಕಡೆ ಆಗಿದೆಯೋ ಎಂಬ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಲೆ ಕುಸಿತ ಹಿನ್ನೆಲೆಯಲ್ಲಿ ಗಲಾಟೆ ಆಗಿದೆ. ರೈತರು ಎಪಿಎಂಸಿ ಕಚೇರಿಗೆ ನುಗ್ಗಿ ಕುರ್ಚಿ, 2 ವಾಹನ ಸುಟ್ಟಿದ್ದಾರೆ. ತಕ್ಷಣ ಪೊಲೀಸರನ್ನು ಕಳಿಸಿದ್ದೇವೆ. ಸದ್ಯ ನಿಯಂತ್ರಣದಲ್ಲಿದೆ. ದಿಢೀರ್ ಬೆಲೆ ಕುಸಿತಕ್ಕೆ ಕಾರಣ ತಿಳಿಯಲು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.