ವಿಶಾಖಪಟ್ಟಣ: ಆಂಧ್ರ ಪ್ರದೇಶದಲ್ಲಿ ಸೆಲ್ಫೀ ಗೀಳಿಗೆ ಮತ್ತೊಂದು ಬಲಿಯಾಗಿದ್ದು, ಮೃಗಾಲಯದ ಸಿಂಹದ ಜತೆ ಫೋಟೋ ತೆಗೆದುಕೊಳ್ಳಲು ಹೋದ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ ತಿರುಪತಿ ಮೃಗಾಲಯದಲ್ಲಿ (Tirupati zoo) ಈ ಅವಘಡ ಸಂಭವಿಸಿದ್ದು, ಪ್ರಾಣಿಗಳನ್ನು ನೋಡಲು ಮೃಗಾಲಯಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬ ಸಿಂಹದ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಅದಿರುವ ಆವರಣಕ್ಕೆ (Lion’s Enclosure) ಜಿಗಿದಿದ್ದಾನೆ. ಈ ವೇಳೆ ಸಿಂಹವು ಆತನ ಮೇಲೆ ದಾಳಿ ಮಾಡಿದ್ದು, ಆತನನ್ನು ಕಚ್ಚಿ ಆತನ ದೇಹವನ್ನು ಛಿದ್ರಗೊಳಿಸಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ರಾಜಸ್ಥಾನದ ಅಳ್ವಾರ್ ನ 38 ವರ್ಷದ ಪ್ರಹ್ಲಾದ್ ಗುಜ್ಜರ್ ಎಂದು ತಿರುಪತಿಯ ವೆಂಕಟೇಶ್ವರ ಝೂಲಾಜಿಕಲ್ ಪಾರ್ಕ್ನ ಅಧಿಕಾರಿಗಳು ಗುರುತಿಸಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸುವ ಪ್ರದೇಶಕ್ಕೆ ಗುಜ್ಜರ್ ಹೋಗಿದ್ದಾಗ ಈ ಅನಾಹುತ ಸಂಭವಿಸಿದೆ. ಸಿಂಹ ಇರುವ ಪ್ರವೇಶಿಸದಂತೆ ಅಲ್ಲಿನ ಸಿಬ್ಬಂದಿ ನೀಡಿದ ಎಚ್ಚರಿಕೆಯನ್ನು ಆತ ನಿರಾಕರಿಸಿದ್ದಾನೆ ಮತ್ತು 25 ಅಡಿ ಎತ್ತರದ ಬೇಲಿಯನ್ನು ಹತ್ತಿ ಸಿಂಹ ಇರುವ ಆವರಣಕ್ಕೆ ಹಾರಿದ್ದಾನೆ ಎಂದು ತಿಳಿಸಿದ್ದಾರೆ.
ಸಿಂಹದ ಆವರಣಕ್ಕೆ ನೆಗೆದ ಕೂಡಲೇ ಅಲ್ಲಿಂದ ಡೊಂಗಲ್ಪುರ ಹೆಸರಿನ ಸಿಂಹವು, ಕಾವಲುಗಾರ ಬಂದು ಅದನ್ನು ನಿಯಂತ್ರಿಸುವ ಹೊತ್ತಿಗೆ ವ್ಯಕ್ತಿಯನ್ನು ಕೊಂದು ಹಾಕಿದೆ. ಪ್ರಸ್ತುತ ತಿರುಪತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಗುಜ್ಜರ್ ಆವರಣಕ್ಕೆ ಪ್ರವೇಶಿಸಿದಾಗ ಕುಡಿದ ಸ್ಥಿತಿಯಲ್ಲಿದ್ದಾನಾ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರಲಿದೆ. ಗುಜ್ಜರ್ ಏಕಾಂಗಿಯಾಗಿ ಮೃಗಾಲಯಕ್ಕೆ ಭೇಟಿ ನೀಡಿದ್ದು, ಅಧಿಕಾರಿಗಳು ಅವರ ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೃಗಾಲಯದ ಕ್ಯುರೇಟರ್ ಸಿ ಸೆಲ್ವಂ ಹೇಳಿದ್ದಾರೆ.
ಮೃಗಾಲಯದಲ್ಲಿ ಕುಮಾರ್, ಸುಂದರಿ ಮತ್ತು ಡೊಂಗಲ್ಪುರ್ ಎಂಬ ಮೂರು ಸಿಂಹಗಳಿವೆ. ಈ ಮೊರು ಸಿಂಹಗಳ ಪೈಕಿ ಡೊಂಗಲ್ಪುರ್ ಸಿಂಹವನ್ನು ಗುರುವಾರ ಪ್ರದರ್ಶಿಸಲಾಯಿತು. ಅವಘಡ ಸಂಭವಿಸುತ್ತಿದ್ದಂತೆ ಡೊಂಗಲ್ಪುರವನ್ನು ಈಗ ಪಂಜರಕ್ಕೆ ಸ್ಥಳಾಂತರಿಸಲಾಗಿದ್ದು, ನಿಗಾದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.