ಬೆಂಗಳೂರು,ಜೂನ್ 24 : ಕಾಕತಾಳೀಯ ಎಂಬಂತೆ ಇಂದು (ಜೂನ್ 24) ಬೆಂಗಳೂರಿನ 42ನೇ ಎಸಿಎಂಎಂ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಕೋರ್ಟ್ನಲ್ಲಿ ಮಾಜಿ ಸಚಿವ ಎಚ್ಡಿ ರೇವಣ್ಣ ಪುತ್ರರ ಅರ್ಜಿ ವಿಚಾರಣೆ ನಡೆದಿದೆ. ಸಲಿಂಗ ಕಾಮ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಜೆಡಿಎಸ್ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣನನ್ನು ಕೋರ್ಟ್, 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಇನ್ನು ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣಗೆ ಸಿಐಡಿ ಕಸ್ಟಡಿಯಿಂದ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಎರಡು ಪ್ರಕರಣಗಳ ಪ್ರತ್ಯೇಕವಾಗಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರು ಸೂರಜ್ನನ್ನು ಜುಲೈ 1ರವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ನೀಡಿದ್ದರೆ, ಪ್ರಜ್ವಲ್ಗೆ ಜುಲೈ 8ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದರು.
ಜುಲೈ 1ರ ವರೆಗೆ ಸೂರಜ್ ಸಿಐಡಿ ಕಸ್ಟಡಿಗೆ
ಸಲಿಂಗ ಕಾಮ, ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸೂರಜ್ ರೇವಣ್ಣನನ್ನು ವಿಚಾರಣೆಗಾಗಿ ಹತ್ತು ದಿನ ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಕೋರ್ಟ್, 10 ದಿನ ಬದಲಾಗಿ 8 ದಿನ ಸಿಐಡಿ ಕಸ್ಟಡಿಗೆ ನೀಡಿದೆ. ಇದರಿಂದ ಜುಲೈ 1 ರವರೆಗೆ ಸೂರಜ್ ರೇವಣ್ಣ ಸಿಐಡಿ ಕಸ್ಟಡಿಯಲ್ಲಿ ಇರಲಿದ್ದಾರೆ.
ಜುಲೈ 8ರವರೆಗೆ ಪ್ರಜ್ವಲ್ಗೆ ನ್ಯಾಯಾಂಗ ಬಂಧನ
ಅಣ್ಣ ಸೂರಜ್ ರೇವಣ್ಣ ಅರ್ಜಿ ವಿಚಾರಣೆ ಮುಗಿಯುತ್ತಿದ್ದಂತೆ ತಮ್ಮ ಪ್ರಜ್ವಲ್ ರೇವಣ್ಣನನ್ನು ಎಸ್ಐಟಿ ತಂಡ ಕೋರ್ಟ್ಗೆ ಹಾಜರುಪಡಿಸಿತು. ಅತ್ಯಾಚಾರ ಪ್ರಕರಣ ಸಂಬಂಧ ಪ್ರಜ್ವಲ್ನ ಕಸ್ಟಡಿಗೆ ಪಡೆಯಲಾಗಿತ್ತು. ಕಸ್ಟಡಿ (ಜೂನ್ 24) ಅಂತ್ಯವಾದ ಹಿನ್ನೆಲೆಯಲ್ಲಿ 42 ಎಸಿಎಂಎಂ ಕೋರ್ಟ್ಗೆ ಎಸ್ಐಟಿ ಹಾಜರು ಪಡಿಸಿದೆ. ಹೀಗಾಗಿ ಜುಲೈ 8ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಜ್ವಲ್ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್
ಇನ್ನು ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆದೇಶ ಕಾಯ್ದಿರಿಸಿದೆ. ಜೂನ್ 26ಕ್ಕೆ ಜಾಮೀನು ಅರ್ಜಿ ಸಂಬಂಧ ಆದೇಶ ನೀಡುವ ಸಾಧ್ಯತೆ ಇದೆ. ಹೀಗಾಗಿ ಪ್ರಜ್ವಲ್ ರೇವಣ್ಣಗೆ ಜಾಮೀನು ಸಿಗುತ್ತಾ? ಅಥವಾ ಜೈಲೇ ಗತಿನಾ ಎನ್ನುವುದನ್ನು ಕಾದುನೋಡಬೇಕಿದೆ.