ಬೆಂಗಳೂರು,ಜ,೨೧: ನಾಳೆ ಅಯೋಧ್ಯೆಯಲ್ಲಿ ಐತಿಹಾಸಿಕ ಭವ್ಯವಾದ ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಸಮಾಜದಲ್ಲಿ ಕೋಮು ಸೌಹರ್ದತೆ, ಶಾಂತಿ ಕಾಪಾಡುವಂತೆ ದೇಶಾದ್ಯಂತ ಗೃಹ ಇಲಾಖೆ ಕ್ರಮ ಕೈಗೊಂಡಿದ್ದು ಪರಿಸ್ಥಿತಿ ಸೂಕ್ಷ್ಮವಾಗಿರುವುದರಿಂದ ಎಚ್ಚರಿಕೆ ವಹಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಅಯೋಧ್ಯೆಯ ರಾಮಮಂದಿರದ ಪ್ರತಿಷ್ಠಾಪನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಂತಿ-ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ.
ಈಗಾಗಲೇ ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ಅಮಾಯಕ ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಸುದ್ದಿಗಳು ಕಿವಿಗೆ ಬಿದ್ದ ತಕ್ಷಣ ಆತುರಕ್ಕೆ ಬಿದ್ದು ಆವೇಶಕ್ಕೆ ಒಳಗಾಗದೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಬೇಕು. ಯಾವುದೇ ಕಾರಣಕ್ಕೂ ಯಾರೂ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಪ್ರಸಂಗತನವನ್ನು ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ಅದಕ್ಕೆ ಕಾಂಗ್ರೆಸ್ ಸರ್ಕಾರ ಹೊಣೆಯಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಈ ಹೇಳಿಕೆಯಲ್ಲಿ ಶಾಂತಿ ಕಾಪಾಡಿಕೊಂಡು ಬರಬೇಕೆಂಬ ಸದಾಶಯಕ್ಕಿಂತ ಹೆಚ್ಚಾಗಿ ಬೆದರಿಕೆ ಮತ್ತು ಪ್ರಚೋದನೆಯ ದನಿ ಇದೆ. ಸರ್ಕಾರಕ್ಕೆ ಅದರ ಕರ್ತವ್ಯದ ಅರಿವಿದೆ. ತಪ್ಪು ನಡೆದರೆ ಕಾನೂನು ಅದರ ಕೆಲಸ ಮಾಡುತ್ತದೆ ಎಂದು ಕೂಡ ಎಚ್ಚರಿಕೆ ನೀಡಿದ್ದಾರೆ.