ಬೆಳಗಾವಿ, ಡಿಸೆಂಬರ್ 25: 1924ರಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮ ಗಾಂಧಿಯವರು ವಹಿಸಿಕೊಂಡಿದ್ದರು. ಈ ಸಮಾವೇಶ ನಡೆದು ನೂರು ವರ್ಷಗಳಾಗಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಬಹಳ ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಗುರುವಾರ ಮತ್ತು ಶುಕ್ರವಾರ (ಡಿಸೆಂಬರ್ 26 ಮತ್ತು 27) ಎರಡು ದಿನ ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ (Centenary of the Congress session) ಕಾರ್ಯಕ್ರಮವು “ಗಾಂಧಿ ಭಾರತ” ಎನ್ನುವ ಹೆಸರಲಿನಲ್ಲಿ ನಡೆಯಲಿದೆ. ಈ ಸಂಬಂಧ ಕಾಂಗ್ರೆಸ್ ಸಕಲ ಸಿದ್ದತೆ ಮಾಡಿಕೊಂಡಿದೆ. ಕಾರ್ಯಕ್ರಮಕ್ಕೆ ಕಾಂಗ್ರೆಸ್ನ ಹೈಕಮಾಂಡ್ ನಾಯಕರೂ ಕೂಡ ಆಗಮಿಸಲಿದ್ದಾರೆ.
ಕಾರ್ಯಕ್ರಮದ ವೇಳಾಪಟ್ಟಿ
ಡಿಸೆಂಬರ್ 26 (ಗುರುವಾರ ಮೊದಲ ದಿನ)
- ಬೆಳಗ್ಗೆ 10ಕ್ಕೆ ತಿಲಕ್ವಾಡಿ ಬಳಿಯ ವೀರಸೌಧದಲ್ಲಿ ಗಾಂಧಿ ಪುತ್ಥಳಿ ಅನಾವರಣ, ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ. ಫೋಟೋ ಗ್ಯಾಲರಿ ಉದ್ಘಾಟನೆ ಮಾಡಲಾಗುತ್ತದೆ.
- ಬೆಳಗ್ಗೆ45ಕ್ಕೆ ಸರ್ದಾರ್ ಮೈದಾನದಲ್ಲಿ ಖಾದಿ ಉತ್ಸವ ಮತ್ತು ಮಳಿಗೆಗಳ ಉದ್ಘಾಟನೆಯಾಗಲಿದೆ.
- 15ಕ್ಕೆ ರಾಮತೀರ್ಥ ನಗರ- ಗಂಗಾಧರ ರಾವ್ ದೇಶಪಾಂಡೆ ಸ್ಮಾರಕ ಭವನ, ಗಂಗಾಧರ ರಾವ್ ದೇಶಪಾಂಡೆ ಪುತ್ಥಳಿ ಹಾಗೂ ಫೋಟೋ ಗ್ಯಾಲರಿ ಉದ್ಘಾಟನೆಯಾಗಲಿದೆ.
- ಮಧ್ಯಾಹ್ನ 3ಕ್ಕೆ ವೀರ ಸೌಧದಲ್ಲಿ ಸಿಡಬ್ಲೂಸಿ ಸಭೆ ನಡೆಯಲಿದೆ.
ಡಿಸೆಂಬರ್ 27 (ಶುಕ್ರವಾರ ಎರಡನೇ ದಿನ)
- ಬೆಳಗ್ಗೆ 10ಕ್ಕೆ ಸುವರ್ಣ ವಿಧಾನಸೌಧದಲ್ಲಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣ, ಮಧ್ಯಾಹ್ನ 12ಕ್ಕೆ ಸುವರ್ಣ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಸಿಎಂ ಸಿದ್ದರಾಮಯ್ಯರಿಂದ ಭೋಜನಕೂಟ ಇರುತ್ತದೆ.
- ಮಧ್ಯಾಹ್ನ 1ಕ್ಕೆ ಸಿಪಿಇಡಿ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.
ಕೊನೆ ಹಂತದ ತಯಾರಿ
ಎರಡು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ ಇದೀಗ ಕೊನೆಯ ಹಂತದ ಸಿದ್ದತೆ ನಡೆದಿದೆ. ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಸತೀಶ್ ಜಾರಕಿಹೊಳಿ, ಮುನಿಯಪ್ಪ, ಎಂಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಎಲ್ಲ ಘಟಾನುಘಟಿ ನಾಯಕರು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಹಲವು ಕಮಿಟಿಗಳನ್ನ ಮಾಡಿದ್ದು ಊಟ, ವಸತಿ ಸೇರಿ ಒಂದೊಂದು ಕಮಿಟಿಗೆ ಒಂದೊಂದು ಜವಾಬ್ದಾರಿಯನ್ನು ಈಗಾಗಲೇ ನೀಡಲಾಗಿದೆ.
ಕಾಂಗ್ರೆಸ್ ಕಚೇರಿಯಲ್ಲಿ ಸಚಿವರು ಮತ್ತು ಶಾಸಕರ ಜೊತೆಗೆ ಸಭೆ ನಡೆಸಿರುವ ಡಿಕೆ ಶಿವಕುಮಾರ್ ಎಲ್ಲವೂ ಅಚ್ಚಕಟ್ಟಾಗಿ ಯಾವುದೇ ಅಸ್ತವ್ಯಸ್ಥ ಆಗದಂತೆ ಕೆಲಸ ಕಾರ್ಯಗಳು ನಡೆಯಬೇಕು ಎಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಮಾತನಾಡಿದ ಸಚಿವ ಮುನಿಯಪ್ಪ ದೇಶದ ವಿವಿಧಡೆಯಿಂದ ಬರುವ ಘಣ್ಯರಿಗೆ ಊಟದ ವ್ಯವಸ್ಥೆ ಸೇರಿ ಎಲ್ಲವನ್ನೂ ಮಾಡಲಾಗುತ್ತೆ ಅಂತ ಹೇಳಿದ್ದಾರೆ.
ಡಿ.26ರಂದು ಬೆಳಗ್ಗೆ ದೆಹಲಿಯಿಂದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ. ನಗರದ ಸರ್ಕ್ಯೂಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಪೀರನವಾಡಿಯಲ್ಲಿರುವ ಗಾಂಧಿ ಭವನದಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಕಾರ್ಯಕಾರಣಿ ಸಭೆ ನಡೆಯಲಿದೆ. ಸಭೆಯಲ್ಲಿ ಗಾಂಧಿ ಪರಿವಾರ, 140 ಜನ ಸಂಸದರು, ಪಿಸಿಸಿ ಅಧ್ಯಕ್ಷರು, ಸಿಎಂ ಭಾಗಿಯಾಗಲಿದ್ದಾರೆ.
ಇನ್ನೂ ಗಾಂಧಿ ಶತಮಾನೋತ್ಸವವನ್ನ ಪಕ್ಷದ ಕಾರ್ಯಕ್ರಮದ ರೀತಿಯಲ್ಲಿ ಮಾಡದೆ ರಾಮ ರಾಜ್ಯದ ಮಾದರಿಯಲ್ಲಿ ಇಡೀ ಸಮಾಜವನ್ನು ಕೂಡಿಸಿಕೊಂಡು ಕಾರ್ಯಕ್ರಮ ಮಾಡುವಂತೆ ರೈತ ಹೋರಾಟಗಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಸದ್ಯ ಇಡೀ ನಗರವೇ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು ಕಾರ್ಯಕ್ರಮದ ಕೊನೆ ಸಿದ್ದತೆ ಕೂಡ ಆಗಿದೆ. ಸಿಎಂ ಸೇರಿದಂತೆ ಹಲವು ನಾಯಕರು ನಗರಕ್ಕೆ ಬರಲಿದ್ದು, ಹೊಟೆಲ್ ವಾಸ್ತವ್ಯದ ವ್ಯವಸ್ಥೆ ಕೂಡ ಆಗಿದೆ.