ಬಳ್ಳಾರಿ, ಸೆ.24 : ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಿಂದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಲ್ಲಿ ಬಳ್ಳಾರಿ ಜಿಲ್ಲೆಗೆ ತೀವ್ರ ಅನ್ಯಾಯವಾಗಿದೆ. ಈ ಬಗ್ಗೆ ಪ್ರತಿ ಪಕ್ಷಗಳು ಮೌನವಾಗಿವೆ ಅದಕ್ಕಾಗಿ ನಾನೇ ಸಧ್ಯದಲ್ಲೇ ಹಲವರೊಂದಿಗೆ ಸೇರಿ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದೇನೆ ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರು ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಸೆ.೧೭ ರಂದು ಕಲ್ಬುರ್ಗಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ದಿಗಾಗಿ ಕಲ್ಬುರ್ಗಿ, ಬೀದರ್ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆಗೆ ೭೨೦೦ ಕೋಟಿ ರೂ ಅನುದಾನ ನೀಡಿದೆ. ಕಲ್ಯಾಣ ಕರ್ನಾಟಕ ಅಂದ್ರೆ ಕೇವಲ ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗೆ ಮಾತ್ರ ಆಗಿದೆ ಅದಕ್ಕಾಗಿ ಇದಕ್ಕೆ ಕಲ್ಯಾಣ ಕರ್ನಾಟಕ ಅನ್ನುವುದು ಬಿಟ್ಟು ಕಲ್ಬುರ್ಗಿ ಕರ್ನಾಟಕ ಅಭಿವೃದ್ಧಿ ಬೋರ್ಡ್ ಎಂದು ಕರೆಯಬೇಕಿದೆ ಎಂದು ಆಗ್ರಹವನ್ನು ವ್ಯಕ್ತಪಡಿಸಿದರು.
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗೆ ಈ ಸಂಪುಟ ಸಭೆಯಲ್ಲಿ ಕೇವಲ ವಿಮ್ಸ್ ಗೆ ಎಂ.ಆರ್.ಐಗೆ ೧೦.೫೦ ,ಕೋಟಿ ರೂ, ಬಳ್ಳಾರಿ ಗುಡ್ಡಕ್ಕೆ ರೂಪ್ ವೇ, ಕಮಲಾಪುರಕ್ಕೆ ಡಾರ್ಮೆಟ್ರಿ, ಹಂಪಿಯ ಧ್ವನಿ ಬೆಳಕಿಗೆ ೨೫ ಕೋಟಿ ಬಿಟ್ಟರೆ ಉಳಿದಂತೆ ಯಾವುದೇ ಯೋಜನೆಗಳಿಗೆ ಅನುದಾನ ನೀಡಿಲ್ಲ ಎಂದು ಬೇಸರವನ್ನು ವ್ಯಕ್ತಪಡಿಸಿದರು. ನಮ್ಮ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಸರಿಯಾದ ಲೀಡರ್ಶಿಪ್ ಇಲ್ಲದ ಕಾರಣ ಜಿಲ್ಲೆಗಳು ಅಭಿವೃಧ್ದಿಯಲ್ಲಿ ಹಿಂದುಳಿದಿವೆ ಎಂದರು.
ಬಳ್ಳಾರಿ ಜಿಲ್ಲೆಗೆ, ರಿಂಗ್ ರೋಡ್ ಇಲ್ಲ, ಮೆಣಸಿನಕಾಯಿ ಮಾರುಕಟ್ಟೆ ಇಲ್ಲ, ವಿಮಾನನಿಲ್ದಾಣ ಇಲ್ಲ, ವಿವಿಗಳ ಸಿಂಡಿಕೇಟ್ ಗೆ ನೇಮಕ ಇಲ್ಲ, ಗಣ್ಯರಿಗೆ ಅಕಾಡೆಮಿಗಳ ಪ್ರಶಸ್ತಿಗಳು ಇಲ್ಲ, ಈ ಬಗ್ಗೆ ವಿರೋಧ ಪಕ್ಷಗಳು ಚಕಾರ ಎತ್ತುತ್ತಿಲ್ಲ. ವಿರೋಧ ಪಕ್ಷಗಳು ಸಹ ಆಡಳಿತ ನಡೆಸುವವರ ಜೊತೆ ಶಾಮೀಲಾದಂತೆ ಕಾಣುತ್ತಿದೆ. ಅಭಿವೃದ್ದಿ ಅನುದಾನದ ವಿಷಯದಲ್ಲಿ ಯಾರ ವಿರುದ್ದ, ಯಾರೂ ಮಾತನಾಡದೇ ಮೌನವೇ ಇವರ ಗುರಿಯಾಗಿದೆಂದರು. ಬಳ್ಳಾರಿ ಹೊಸ್ಪೇಟೆ ಯಾವಾಗ ವಿಭಜನೆ ಆಯ್ತೋ ಅವಾಗೇ ಅಸ್ಥಿತ್ವವನ್ನು ಕಳೆದುಕೊಂಡಿದ್ದೇವೆ,ಗಣಿದಣಿಗಳು ಎಂದು ಹೆಸರಿಟ್ಟು ನಮ್ಮನ್ನು ಮುಚ್ಚಿ ಬಿಟ್ಟಿದ್ದಾರೆ ಎಂದರು.
ಬಳ್ಳಾರಿ ಜಿಲ್ಲೆ ವಿಭಜನೆಯಾಗಿದ್ದರಿಂದ ಜಿಲ್ಲೆಯಲ್ಲಿ ಶಕ್ತಿಯುತವಾದ ನಾಯಕತ್ವ ಶಕ್ತಿ ಕಳೆದುಕೊಂಡಿದೆ. ಈ ಹಿಂದೆ ಎಂ.ಪಿ.ಪ್ರಕಾಶ್, ಎಂ.ವೈ.ಘೋರ್ಪಡೆ ಅವರಂತಹ ನಾಯಕತ್ವದಿಂದ ಜಿಲ್ಲೆಯ ಅಭಿವೃದ್ದಿಗೆ ಪೂರಕವಾಗಿತ್ತು. ಈಗ ಅಂತಹವರು ಇಲ್ಲದಿರುವುದರಿಂದ ಈ ಪರಿಸ್ಥಿತಿ ಬಂದಿದೆ ಎಂದರು. ಬಳ್ಳಾರಿಗೆ ಉಸ್ತುವಾರಿ ಸಚಿವರು ಬಂದು ಪರಿಶೀಲನಾ ಸಭೆ ನಡೆಸಿಲ್ಲ. ಬಂದರೂ ಕಚೇರಿಗಳಲ್ಲಿ ಕುಳಿತು ಅಧಿಕಾರಿಗಳು ಹೇಳಿದ್ದನ್ನು ಕೇಳಿ ಹೋದರೆ ಏನು ಅಭಿವೃದ್ಧಿ ಆಗುತ್ತೆ. ಎರೆಡು ಜಲ್ಲೆಗೂ ಒಬ್ಬರೇ ಇದ್ದು ಅವರು ಜಿಲ್ಲೆಯ ಅಭಿವೃದ್ಧಿಗೆ ಆಧ್ಯತೆ ನೀಡುತ್ತಿಲ್ಲ ಎಂದರು.
ಜಿಲ್ಲೆಯಿAದ ಐದು ಶಾಸಕರು, ಸಂಸದರನ್ನು ಕಾಂಗ್ರೆಸ್ ನಿಂದ ಆಯ್ಕೆ ಮಾಡಿದ್ದರೂ ಉಪಯೋಗವಿಲ್ಲದಂತಾಗಿದೆ. ಅದಕ್ಕಾಗಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಒಂದು ದಿನ ಡಿಸಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಿದೆಂದು ಹೇಳಿದರು. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ(ಬುಡಾ)ದಲ್ಲಿ ಅಕ್ರಮವಾಗಿ ನಿವೇಶನಗಳನ್ನು ಮಾಡಿದ್ದು. ಈಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ್ದು. ಅವರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವರಿಂದ ಕ್ರಮ ಜರುಗದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗಲಿದೆಂದರು.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೇ ಸೀಮಿತ:-ನಮ್ಮ ಬಳ್ಳಾರಿಯ ಜಿಲ್ಲಾಧಿಕಾರಿ ಕೇವಲ ಕಚೇರಿಗೇ ಸೀಮಿತವಾಗಿದ್ದಾರೆ, ನಗರದಲ್ಲಿ ಸಂಚಾರ ಮಾಡಿದರೇ ಜನರಿಂದ ದೂರುಗಳು ಬರುತ್ತವೆ, ಎಲ್ಲಿ ಏನಿದೆ ಎನ್ನುವುದು ಅವರಿಗೆ ಕೂಡಾ ತಿಳಿಯುತ್ತದೆ, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತದೆ,ಡೆಂಗ್ಯೂ ರಿವೀವ್ ಮೀಟಿಂಗ್ ಕಚೇರಿಯಲ್ಲಿ ಮಾಡಿದರೇನು ಲಾಭ, ಜನರಲ್ಲಿ ತಿರಿಗಾಡಬೇಕು, ಎಲ್ಲಿ ನೀರು ನಿಲ್ಲುತ್ತವೆ, ಎಲ್ಲಿ ಗಲೀಜು ಇದೆ ಎಂದು ಪರಿಶೀಲಿಸಿದರೆ ಅಧಿಕಾರಿಗಳು ಹಿಂದೆ ಬರ್ತಾರೆ ,ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.