ಬಳ್ಳಾರಿ, ಸೆ.22: ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ನೂತನ ಪದಾಧಿಕಾರಿಗಳ ಪಟ್ಟಿ ಸಿದ್ಧಗೊಂಡಿದ್ದು, ಹೆಸರುಗಳನ್ನು ಶೀಘ್ರ ಘೋಷಣೆ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ವಿ.ಶ್ರೀನಿವಾಸ (ಮಿಂಚು) ತಿಳಿಸಿದ್ದಾರೆ.
ಇತ್ತೀಚೆಗೆ ಸಂಘದ ಸದಸ್ಯರ ತಂಡ ಕೊಪ್ಪಳ ಜಿಲ್ಲೆಯ ಶ್ರೀಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ದರ್ಶನಕ್ಕೆ ತೆರಳಿ ಮರಳುವ ಸಂದರ್ಭ ಖಾಸಗಿ ತೋಟದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ.
ಲಾರಿ ಮಾಲೀಕರ ಕಲ್ಯಾಣವೇ ನಮ್ಮ ಮೊದಲ ಆದ್ಯತೆಯಾಗಿದೆ, ಸಮರ್ಥವಾಗಿ ಕೆಲಸ ಮಾಡುವ ಉದ್ಧೆಶದಿಂದ ಹಳೆಯ ಸಮಿತಿಯನ್ನು ವಿಸರ್ಜಿಸಿ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಗುತ್ತಿದೆ, ಈಗಾಗಲೇ ಪಟ್ಟಿ ಕೂಡ ಪೂರ್ಣಗೊಂಡಿದ್ದು, ಶೀಘ್ರವೇ ಹೆಸರುಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದರು.
ನಮ್ಮ ಸಂಘಕ್ಕೆ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು, ವಿವಿಧ ಉದ್ಯಮಿಗಳು ಸಲಹೆ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದ ಮಿಂಚು ಶ್ರೀನಿವಾಸ, ಲಾರಿ ಮಾಲೀಕರ ಸಂಘದ ಬಗ್ಗೆ ಸಾರ್ವಜನಿಕರಲ್ಲಿ ಇರುವ ಅಭಿಪ್ರಾಯ ಹೋಗಲಾಡಿಸಿ, ಒಳ್ಳೆಯ ಅಭಿಪ್ರಾಯ ಬರುವಂತೆ ಕೆಲಸ ಮಾಡೋಣ ಎಂದರು.
ಲಾರಿ ಮಾಲೀಕರ ಐಕ್ಯತೆಯಿಂದ ಹೋರಾಡಿದರೆ ಮಾತ್ರ ನಮ್ಮ ಸಮಸ್ಯೆಗಳು ಬಗೆ ಹರಿಯಲಿವೆ ಎಂದರು.
ಈ ಸಂದರ್ಭ ಸಂಘದ ಸದಸ್ಯರು, ಹಲವಾರು ಜನ ಹಿರಿಯರು ಹಾಜರಿದ್ದರು.